‘ಪಿಎಸ್‍ಎಲ್ ಆಡಿದ ಇಂಗ್ಲೆಂಡ್ ಕ್ರಿಕೆಟರ್ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ಸೋಂಕು’

Public TV
2 Min Read

– ಶಂಕೆ ವ್ಯಕ್ತಪಡಿಸಿದ ಪಾಕ್ ಮಾಜಿ ಕ್ರಿಕೆಟರ್

ಇಸ್ಲಾಮಾಬಾದ್: ಇಂಗ್ಲೆಂಡ್‍ನ ಕ್ರಿಕೆಟರ್ ಅಲೆಕ್ಸ್ ಹೇಲ್ಸ್ ಅವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್, ವೀಕ್ಷಕ ವಿವರಣೆಗಾರ ರಮೀಜ್ ರಾಜಾ ಹೇಳಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಿಎಸ್‍ಎಲ್‍ಅನ್ನು ಮುಂದೂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಿಸಿಬಿ, ಹೊಸ ವೇಳಾಪಟ್ಟಿಯ ಪ್ರಕಾರ ಟೂರ್ನಿಯನ್ನು ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಟೂರ್ನಿ ಮುರು ಆರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ. ಇದನ್ನೂ ಓದಿ: ಕ್ರಿಕೆಟ್‍ನಲ್ಲೂ ಮೊಂಡುತನ ತೋರಿ ಸೋತ ಪಾಕ್

ಇದೇ ವಿಚಾರವಾಗಿ ಕರಾಚಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಜೀಜ್ ರಾಜಾ, “ನನಗೆ ತಿಳಿದಿರುವಂತೆ ಹೇಲ್ಸ್ ಅವರಿಗೆ ಯಾವುದೇ ಪರೀಕ್ಷೆ ನಡೆಸಿಲ್ಲ. ಆದರೆ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿವೆ. ಆದರೆ ನಾವೆಲ್ಲರೂ ಈಗ ಬಹಳ ಜಾಗರೂಕರಾಗಿರಬೇಕು. ಈ ಸಮಸ್ಯೆಯನ್ನು ಎದುರಿಸಲು ಸಾಮಾನ್ಯ ಜ್ಞಾನ, ವಿಧಾನವನ್ನು ಅನುಸರಿಸಬೇಕು” ಎಂದು ಹೇಳಿದ್ದಾರೆ.

ಪಿಎಸ್‍ಎಲ್ ಟೂರ್ನಿಯಲ್ಲಿ ಹೆಲ್ಸ್ ಅವರು ಕರಾಚಿ ಕಿಂಗ್ಸ್ ಪರ ಆಡಿದ್ದು, ಪಾಕಿಸ್ತಾನದಲ್ಲಿ ವೈರಸ್ ಹರಡಿದ ನಂತರ ಇತರ ಇಂಗ್ಲೆಂಡ್ ಆಟಗಾರರೊಂದಿಗೆ ತವರಿಗೆ ಮರಳಿದ್ದಾರೆ. ಪಿಎಸ್‍ಎಲ್ ಟೂರ್ನಿಯ ವಿವಿಧ ತಂಡಗಳಲ್ಲಿ ಇಂಗ್ಲೆಂಡ್‍ನ 6 ಆಟಗಾರರಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಸೂಚನೆಯಂತೆ ಜೇಸನ್ ರಾಯ್ ಸೋಮವಾರ ತಡರಾತ್ರಿಯೇ ಲಂಡನ್‍ಗೆ ಮರಳಿದ್ದಾರೆ. ಇದನ್ನೂ ಓದಿ:  ಕೊರೊನಾ ಸೋಂಕು ತಗುಲಿ ಸ್ಪೇನ್ ಫುಟ್ಬಾಲ್ ಕೋಚ್ ಸಾವು

31 ವರ್ಷದ ಹೇಲ್ಸ್ ಬಲಗೈ ಓಪನರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇಂಗ್ಲೆಂಡ್ ತಲುಪಿದ ನಂತರ ಪ್ರತ್ಯೇಕವಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸೀಂ ಖಾನ್ ಕೂಡ ಪಿಎಸ್‍ಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ವಿದೇಶಿ ಆಟಗಾರರೊಬ್ಬರಿಗೆ ಕೊರೊನಾ ಸೋಂಕು ಇದೆ ಎಂಬ ಶಂಕಿಸಲಾಗಿದೆ ಎಂದು ಹೇಳಿದ್ದರು. ಆದರೆ ಅವರು ಆಟಗಾರನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪಿಎಸ್‍ಎಲ್ ಆಟಗಾರರು ಮತ್ತು ತಂಡದ ಜೊತೆಯಿದ್ದ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾಸೀಂ ಖಾನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *