ಮಂಗ್ಳೂರಲ್ಲಿ ಎಸ್ಕೇಪ್ ಆದವ ಬೆಂಗ್ಳೂರಲ್ಲಿ ಸಿಕ್ಕಿಬಿದ್ದ

Public TV
1 Min Read

– ಕೋರ್ಟಿಗೆ ಕರ್ಕೊಂಡು ಹೋಗುವಾಗ ಪರಾರಿ

ಬೆಂಗಳೂರು: ಕುಖ್ಯಾತ ಸರಗಳ್ಳನೊಬ್ಬ ಮಂಗಳೂರು ಪೊಲೀಸರ ಕೈಯಿಂದ ಎಸ್ಕೇಪ್ ಆಗಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕಳೆದ ತಿಂಗಳಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಕಳ್ಳ ಇಮ್ರಾನ್ ಮತ್ತೆ ಕಳ್ಳತನಕ್ಕೆ ಹೋಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಇದೇ ಕೇಸ್ ಸಂಬಂಧ ಪುತ್ತೂರು ಪೊಲೀಸರು ಕೋರ್ಟ್‍ಗೆ ಕರೆದುಕೊಂಡು ಹೋಗುತ್ತಿದ್ದರು. ಕೋರ್ಟ್ ಆವರಣಕ್ಕೆ ಹೋಗುತ್ತಿದ್ದಂತೆ ತನ್ನ ಕೈಚಳಕ ತೋರಿಸಿದ ಕಳ್ಳ ಇಮ್ರಾನ್ ಏಕಾಏಕಿ ಪೊಲೀಸರ ಕೈತಪ್ಪಿಸಿಕೊಂಡು ಕೋರ್ಟಿನಿಂದಲೇ ಎಸ್ಕೇಪ್ ಆಗಿದ್ದ.

ಇದಾದ ನಂತರ ಬೆಂಗಳೂರಿನಲ್ಲಿ ತನ್ನ ಕೈಚಳಕ ತೋರಿಸೋಕೆ ಶುರು ಮಾಡಿದ್ದ. ಆದರೆ ಇಮ್ರಾನ್ ಟೈಂ ಸರಿ ಇರಲಿಲ್ಲ ಅನ್ಸುತ್ತೆ, ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ಮನೆಯೊಂದರಲ್ಲಿ ಸರಗಳವು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಕೂಡಲೇ ವಶಕ್ಕೆ ಪಡೆದ ಪೊಲೀಸರು ನಗರದ ಮಡಿವಾಳ, ಸುಬ್ರಮಣ್ಯಪುರ, ಬಸವನಗುಡಿ, ಸೇರಿದಂತೆ ಸುಮಾರು ಒಬ್ಬತ್ತು ಕೇಸ್‍ಗಳನ್ನು ಬೆಂಗಳೂರಿನಲ್ಲೇ ಪತ್ತೆ ಮಾಡಿದ್ರು.

ಇಮ್ರಾನ್ ಮೇಲೆ ಶಿವಮೊಗ್ಗ, ಮಂಗಳೂರು, ಸೇರಿದಂತೆ 30ಕ್ಕೂ ಹೆಚ್ಚು ಕೇಸ್‍ಗಳಿವೆ. ಅದ್ದೂರಿ ಮದುವೆ ಸಮಾರಂಭಗಳಿಗೆ ಎಂಟ್ರಿಯಾಗುತ್ತಿದ್ದ ಈ ಗ್ಯಾಂಗ್ ಕ್ಷಣಮಾತ್ರದಲ್ಲೇ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗ್ತಿತ್ತು.

ಸದ್ಯ ಬೆಂಗಳೂರಿನ ಬಸವನಗುಡಿ ಪೊಲೀಸರು ಇಮ್ರಾನ್ ಆತನ ಗುರು ಮಹಮ್ಮದ್ ರಫೀಕ್ ಸೇರಿ ನಾಲ್ವರನ್ನು ಬಂಧಿಸಿ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *