ಶಿವಲಿಂಗದಲ್ಲಿ ಶಿವೈಕ್ಯರಾದ ಮಾತೆ ಮಾಣಿಕೇಶ್ವರಿ ಇನ್ನು ನೆನಪು ಮಾತ್ರ

Public TV
2 Min Read

ಕಲಬುರಗಿ: ಕಳೆದ ಏಳು ದಶಕಗಳಿಂದ ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯದೈವ, ಎಲ್ಲರಿಂದಲೂ ಅಮ್ಮಾ ಎಂದು ಭಕ್ತಿಯಿಂದ ಪ್ರೀತಿಗೆ ಪಾತ್ರವಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮ ಇನ್ನು ನೆನಪು ಮಾತ್ರ. ಇಂದು ಅಮ್ಮನವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಈ ಮೂಲಕ ಮಾತಾ ಮಾಣಿಕೇಶ್ವರಿ ಅಮ್ಮ ಶಾಶ್ವತವಾಗಿ ಶಿವೈಕ್ಯರಾದರು.

ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಯಾನಾಗುಂದಿಗೆ ಆಗಮಿಸಿದ್ದು, ಕಣ್ಣು ಹಾಯಿಸಿದಲ್ಲೆಲ್ಲಾ ಅಮ್ಮನ ದರ್ಶನಕ್ಕೆ ಕಾದು ನಿಂತಿರುವ ಸಾವಿರಾರು ಭಕ್ತರು ಕಾಣುತ್ತಿದ್ದರು. ಈ ಮೂಲಕ ಕೊನೆಯ ಬಾರಿ ಅಮ್ಮನ ಮುಖವನ್ನು ನೋಡಿ ನಮ್ಮ ಜನ್ಮವನ್ನು ಪಾವನ ಮಾಡಿಕೊಳ್ಳೋಣ ಎಂದು ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಭಕ್ತರು ಮಾತೆಯ ಅಂತಿಮ ದರ್ಶನ ಪಡೆದರು.

ಸಾಗರೋಪಾದಿಯಲ್ಲಿ ಜನರು ಬಂದಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇನ್ನೊಂದೆಡೆ ಪೊಲೀಸರು ಬಾರದ ಲೋಕಕ್ಕೆ ಹೋದ ಮಹಾಮಾತೆಗೆ ಮೂರು ಸುತ್ತು ಗುಂಡು ಹಾರಿಸಿ ಗೌರವವನ್ನು ಸೂಚಿಸಿದರು.

ಭಾನುವಾರ ಮುಂಜಾನೆಯಿಂದ ಮಾಣಿಕೇಶ್ವರಿ ಅಮ್ಮನ ಪ್ರಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಭಾನುವಾರದಿಂದ ಸಾವಿರಾರು ಜನರು ಆಶ್ರಮಕ್ಕೆ ಆಗಮಿಸಿ ಅಮ್ಮನ ದರ್ಶನ ಪಡೆದರು. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಇಂದು ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಮಾತ್ರ ಮಾತಾ ಮಾಣಿಕೇಶ್ವರಿ ಅಮ್ಮನ ಪ್ರಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಂತರ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನೆರವೇರುತ್ತದೆ ಅಂತ ಟ್ರಸ್ಟ್ ನವರು ಹೇಳಿದ್ದರು.

ಹೀಗಿದ್ದರೂ ಇಂದು ಸಾವಿರಾರು ಜನರು ಆಗಮಿಸಿದ್ದರಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಪ್ರಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವಗಳನ್ನು ಸಲ್ಲಿಸಿದರು. ರಾಜ್ಯ ಸರ್ಕಾರದ ಪರವಾಗಿ ಸಚಿವ ಪ್ರಭು ಚೌಹಾನ್ ಗೌರವ ಸಲ್ಲಿಸಿದರು.

ನಮ್ಮೆಲ್ಲರಿಗೆ ತಾಯಿ ಸ್ವರೂಪಳಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಭಕ್ತರು ಪ್ರಾರ್ಥಿಸಿದರು. ಪ್ರಾರ್ಥಿವ ಶರೀರದ ದರ್ಶನ ನಂತರ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಮ್ಮನ ಅಂತ್ಯಕ್ರಿಯೆ ಪ್ರಕ್ರಿಯೆಗಳು ನಡೆದವು. ಗಂಗಾ ಜಲದಿಂದ ಪ್ರಾರ್ಥಿವ ಶರೀರವನ್ನು ಶುದ್ಧೀಕರಿಸಲಾಯಿತು. ನಂತರ ಆಶ್ರಮದಲ್ಲಿರುವ ನಾಗದೇವತೆ ಮೇಲೆ ಪ್ರಾರ್ಥಿವ ಶರೀರವನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಇದಾದ ನಂತರ ಗುಹೆಯಲ್ಲಿರುವ ಶಿವಲಿಂಗದಲ್ಲಿಟ್ಟು, ವಿಭೂತಿಗಳನ್ನು ಜೋಡಿಸಿ ಅಂತಿಮ ಕ್ರಿಯೆಗಳನ್ನು ನೆರವೇರಿಸಲಾಯಿತು.

ಮಾತಾ ಮಾಣಿಕೇಶ್ವರಿ ಅಮ್ಮ ಈ ಹಿಂದೆ ಜೀವಂತ ಸಮಾಧಿಯಾಗುವ ಇಚ್ಛೆ ಹೊಂದಿದ್ದರು. ಆದರೆ ಸರ್ಕಾರ ಅವಕಾಶ ನೀಡಿರಲಿಲ್ಲ. ಹೀಗಾಗಿ ಹದಿನೈದು ವರ್ಷಗಳ ಹಿಂದೆಯೇ ಅಮ್ಮ ಆಶ್ರಮದಲ್ಲಿ ಗುಹೆ ಮಾಡಿಸಿದ್ದರು. ಅಲ್ಲಿ ಬೃಹತ್ ಶಿವಲಿಂಗ ಕೂಡ ನಿರ್ಮಾಣ ಮಾಡಿಸಿದ್ದರು. ಅದೇ ಶಿವಲಿಂಗದಲ್ಲಿ ಅಮ್ಮನ ಪ್ರಾರ್ಥಿವ ಶರೀರವನ್ನು ಇಟ್ಟು, ವಿಭೂತಿ ಹಾಕಿ ಅಂತಿಮ ಸಂಸ್ಕಾರ ಸಲ್ಲಿಸಲಾಯಿತು. ಗುಹೆಯಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಹೋಗಲು ಅವಕಾಶವಿತ್ತು. ಹೀಗಾಗಿ ಆಶ್ರಮದ ಟ್ರಸ್ಟಿಗಳು ಮತ್ತು ಕೆಲ ಜನಪ್ರತಿನಿಧಿಗಳು ಮಾತ್ರ ಅಮ್ಮನ ಪ್ರಾರ್ಥಿವ ಶರೀರವನ್ನು ಗುಹೆಯೊಳಗಿನ ಶಿವಲಿಂಗದಲ್ಲಿಡುವ ಸಮಯದಲ್ಲಿ ಹಾಜರಿದ್ದರು.

ಎಂಬತ್ತೇಳು ವರ್ಷದ ಮಾತಾ ಮಾಣಿಕೇಶ್ವರಿ ಅಮ್ಮ ಇದೇ ತಿಂಗಳು ಏಳರಂದು ಮಾಣಿಕೇಶ್ವರಿ ಆಶ್ರಮದಲ್ಲಿ ಶಿವೈಕ್ಯರಾಗಿದ್ದರು. ಕಳೆದ ಅನೇಕ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮಾಣಿಕೇಶ್ವರಿ ಅಮ್ಮಾ ಚಿರನಿದ್ರೆಗೆ ಜಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *