‘ಟೆಕ್ಕಿ ಕೆಲ್ಸ ಮಾಡುತ್ತಿದ್ದ ಕಂಪನಿ ಅಡ್ರೆಸ್ ಹೇಳಿ’ – ಆರೋಗ್ಯ ಇಲಾಖೆಗೆ ದುಂಬಾಲು ಬೀಳ್ತಿರುವ ಬೆಂಗ್ಳೂರಿಗರು

Public TV
2 Min Read

ಬೆಂಗಳೂರು: ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೊನಾ ಕರ್ನಾಟಕಕ್ಕೂ ಕಾಲಿಟ್ಟಿದೆ. ಆಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಟೆಕ್ಕಿ ಕೊರೊನಾ ವೈರಸ್‍ಗೆ ತುತ್ತಾಗಿರುವುದು ಅಧಿಕೃತವಾಗಿ ಪ್ರಕಟವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಟೆಕ್ಕಿ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ? ಅಲ್ಲಿನ ವಿಳಾಸ ಬಹರಂಗಪಡಿಸಿ ಎಂದು ಬೆಂಗಳೂರಿಗರು, ಇತರೆ ಟೆಕ್ಕಿಗಳು ಆರೋಗ್ಯ ಇಲಾಖೆಗೆ ದುಂಬಾಲು ಬೀಳುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕು ತಗುಲಿರುವ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿಲ್ಲ. ಗೌಪ್ಯ ಮಾಹಿತಿಯಡಿ ಟೆಕ್ಕಿಯ ಹೆಸರು, ಆತ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ಹೆಸರನ್ನು ಇಲಾಖೆ ಮುಚ್ಚಿಟ್ಟಿದೆ. ಆದ್ದರಿಂದ ಟ್ವಿಟರ್ ಮೂಲಕ ಇಲಾಖೆಗೆ ಟೆಕ್ಕಿಗಳು, ಬೆಂಗಳೂರಿಗರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇಲಾಖೆಯ ಸಹಾಯ ವಾಣಿಗೂ ಕರೆಗಳ ಮೇಲೆ ಕರೆ ಮಾಡುತ್ತಿದ್ದಾರೆ.

ಕಂಪನಿಯ ಹೆಸ್ರುನ್ನು ಬಹಿರಂಗ ಪಡಿಸಿ, ಚೀನಾದಂತೆ ಎಲ್ಲವನ್ನೂ ಮುಚ್ಚಿಡುವ ಕೆಲಸ ಮಾಡಬೇಡಿ ಎಂದು ನೆಟ್ಟಿಗರು ಆರೋಗ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೆಲಸಕ್ಕೆ ಹೋಗೋಕೆ ಭಯವಾಗುತ್ತಿದೆ ಎಂದು ಟೆಕ್ಕಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಕೊರೊನಾ ಭೀತಿಗಿಂತ ಈಗ ಬೆಂಗಳೂರಿಗರಿಗೆ ಸೋಂಕಿಗೆ ತುತ್ತಾಗಿರುವ ಟೆಕ್ಕಿ ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನುವ ಕುತೂಹಲವೇ ಹೆಚ್ಚಾಗಿದೆ.

ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
ಟೆಕ್ಕಿ ಫೆ. 17 ರಂದು ದುಬೈಗೆ ಕೆಲಸದ ಸಂಬಂಧ ತೆರಳಿದ್ದರು. ಅಲ್ಲಿ ಹಾಕಾಂಗ್ ಗೆಳೆಯರ ಜೊತೆ ಎರಡು ಮೂರು ದಿನ ಕೆಲಸ ಮಾಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದುಬೈನಿಂದ ಫೆ.20ರಂದು ಬೆಂಗಳೂರಿಗೆ ಬಂದವರಿಗೆ ಜ್ವರ ಕಾಣಿಸಿಕೊಂಡಿತ್ತು. ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ ಟೆಕ್ಕಿ ನಗರದ ವಿವಿಧೆಡೆ ಓಡಾಡಿದ್ದರು. ಫೆ.22 ರಂದು ಬಸ್ ಮೂಲಕ ಹೈದರಾಬಾದ್‍ಗೆ ತೆರಳಿ ಸಿಕಂದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಇರುವುದು ಖಚಿತವಾಗಿತ್ತು.

ಟೆಕ್ಕಿ ಈಗ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಈಟಾಲ ರಾಜೇಂದ್ರ ತಿಳಿಸಿದ್ದಾರೆ. ಟೆಕ್ಕಿಯ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಟೆಕ್ಕಿ ಸಿಕಂದರಾಬಾದ್‍ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‍ನ ಅಪೊಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟು 80 ಮಂದಿಯ ಮೇಲೆ ನಿಗಾ ಇಡಲಾಗಿದ್ದು ತೆಲಂಗಾಣ ಸರ್ಕಾರ ಈಗಾಗಲೇ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *