ಮಧುಮೇಹದಂಥ ಜೀವನಶೈಲಿ ಕಾಯಿಲೆಗೆ ಕ್ರೀಡೆಯೇ ಮದ್ದು: ಡಾ. ಅಶ್ವತ್ಥನಾರಾಯಣ

Public TV
2 Min Read

ಬೆಂಗಳೂರು: ಬೊಜ್ಜು, ಹೈಪರ್ ಟೆನ್ಶನ್, ಮಧುಮೇಹದಂಥ ಜೀವನಶೈಲಿಯ ಕಾಯಿಲೆಗೆ ಕ್ರೀಡೆಯೇ ಮದ್ದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

‘ಡಯಾಬಿಟಿಸ್ ಇಂಡಿಯಾ 2020’ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ, “ಸಣ್ಣ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿರುವ ಮಧುಮೇಹ ಸಮಸ್ಯೆ ನಿಜಕ್ಕೂ ಕಳವಳಕಾರಿ, ಇದಕ್ಕೆ ಪರಿಹಾರ ಎಂದರೆ ಆಟೋಟದಲ್ಲಿ ತೊಡಗಿಕೊಳ್ಳುವುದು,” ಎಂದು ಸಲಹೆ ನೀಡಿದರು.

“ಜೀವನಶೈಲಿಯ ಸಮಸ್ಯೆಯಿಂದ ಬರುವಂಥ ಸ್ಥೂಲಕಾಯ, ಹೈಪರ್ ಟೆನ್ಶನ್, ಮಧುಮೇಹದಂಥ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕ್ರೀಡೆಗೆ ಒತ್ತು ನೀಡಿ, ‘ಫಿಟ್ ಇಂಡಿಯಾ’ ಯೋಜನೆ ತಂದಿದೆ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದು, ಕಾಯಿಲೆ ತಡೆ ಹಾಗೂ ನಿಯಂತ್ರಣಕ್ಕೆ ನಮ್ಮ ಕಡೆಯಿಂದ ಎಲ್ಲ ರೀತಿಯ ನೆರವು ನೀಡಲು ಬದ್ಧ,” ಎಂದು ಅವರು ಭರವಸೆ ಕೊಟ್ಟರು.

“ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜೀವನಶೈಲಿಯ ಆರೋಗ್ಯ ಸಮಸ್ಯೆ ನಿಯಂತ್ರಣ, ನಿವರ್ಹಣೆಯೇ ದೊಡ್ಡ ಸವಾಲು. ಭಾರತದಲ್ಲಿ 7.7 ಕೋಟಿ ಮಧುಮೇಹಿಗಳಿದ್ದು, ಇನ್ನು ಎಷ್ಟೋ ಜನರಿಗೆ ತಮಗೆ ಮಧುಮೇಹ ಇದೆ ಎಂಬ ವಿಷಯವೇ ಗೊತ್ತಿರುವುದಿಲ್ಲ. ಅಂಥವರನ್ನು ಪರೀಕ್ಷೆಗೆ ಒಳಪಡಿಸುವುದು ಒಂದು ರೀತಿಯ ಸವಾಲಾದರೆ, ಈಗಾಗಲೇ ಸಮಸ್ಯೆಯಿಂದ ಬಳಲುತ್ತಿರುವವರು ಕಾಯಿಲೆ ನಿಯಂತ್ರಣಕ್ಕೆ ಒತ್ತು ನೀಡದಿರುವುದು ಮತ್ತೊಂದು ಸವಾಲು. ಅಂಕಿ ಅಂಶಗಳ ಪ್ರಕಾರ ಶೇ.70ರಷ್ಟು ರೋಗಿಗಳು ಮಧುಮೇಹ ನಿಯಂತ್ರಿಸುವುದರಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂಥ ಸಮಾವೇಶಗಳು ನಿಜಕ್ಕೂ ದೊಡ್ಡ ವ್ಯತ್ಯಾಸ ಮಾಡಬಲ್ಲದು. ಕಾಯಿಲೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿನೂತನ ಚಿಕಿತ್ಸಾ ವಿಧಾನಗಳ ಮೇಲೆ ಬೆಳಕು ಚೆಲ್ಲುವ ಮೂಲಕ ವೈದ್ಯರಿಗೂ ನೆರವಾಗುವುದು,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡೆ ಈಗ ಪಠ್ಯಕ್ರಮ
“ಸಣ್ಣ ವಯಸ್ಸಿನವರಲ್ಲಿ ಟೈಪ್-2 ಮಧುಮೇಹ ಸಮಸ್ಯೆ ಹೆಚ್ಚುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಪರೀಕ್ಷಾ ಒತ್ತಡ. ಮೊಬೈಲ್, ವೀಡಿಯೋ ನೋಡುವ ಚಟ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಮಕ್ಕಳು ಹೊರಗೆ ಆಡಲು ಹೋಗದಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ಶಾಲೆಗಳಲ್ಲೂ ಕ್ರೀಡೆಗೆ ಹೆಚ್ಚಿನ ಅನುಕೂಲ ಇಲ್ಲದಿರುವುದೂ ಸಮಸ್ಯೆಗೆ ಮತ್ತೊಂದು ಕಾರಣ. ಎಷ್ಟೋ ಶಾಲೆಗಳಲ್ಲಿ ಮೈದಾನ ಇರುವುದಿಲ್ಲ. ಕೆಲ ಶಾಲೆಗಳಲ್ಲಿ ಮೈದಾನ ಇದ್ದರೂ ಆಡಲು ಕಳುಹಿಸುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಅರಿತು ಕೇಂದ್ರ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಡಿ, ಕ್ರೀಡೆಯೂ ಪಠ್ಯಕ್ರಮದ ಭಾಗವನ್ನಾಗಿಸಿದೆ. ಈ ಮೊದಲು ಕ್ರೀಡೆ ಪಠ್ಯೇತರ ಚಟುವಟಿಕೆ ಆಗಿತ್ತು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಕಲಿಕೆಯಲ್ಲೂ ಮುಂದಿರುತ್ತಾರೆ ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ,” ಎಂದರು.

ಆಯುಷ್ಮಾನ್ ಭಾರತ್
“ದೇಶಾದ್ಯಂತ 1.5 ಲಕ್ಷ ಆಯುಷ್ಮಾನ್ ಉಪ ಕೇಂದ್ರಗಳಿದ್ದು, ಜೀವನ ಶೈಲಿಯಿಂದ ಬರುವಂಥ ಆರೋಗ್ಯ ಸಮಸ್ಯೆಗಳಿಗೆ ಇವು ಪರಿಹಾರ ಕೇಂದ್ರಗಳಾಗುತ್ತವೆ. ಮಧುಮೇಹ ಪರೀಕ್ಷಾ ಸೌಲಭ್ಯವೂ ಇಲ್ಲಿ ಲಭ್ಯವಿರಲಿದೆ. ಸರ್ಕಾರದ ಹಾಗೂ ವೈದ್ಯ ಸಮೂಹದ ಪ್ರತಿನಿಧಿಯಾಗಿ ಉತ್ತಮ ಜೀವನಶೈಲಿಯ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ,” ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *