ಯಕ್ಷಗಾನ ವೇಷದಲ್ಲಿ ಅಬ್ಬರಿಸಿದ ಮುಸ್ಲಿಂ ಯುವತಿ

Public TV
1 Min Read

ಮಂಗಳೂರು: ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಆದರೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ವೇಷ ಹಾಕಿ ರಕ್ಕಸನ ವೇಷದಲ್ಲಿ ಅಬ್ಬರಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸಿದ್ದಾರೆ.

ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ವೇಷ ಹಾಕಿಕೊಂಡು ಕುಣಿಯುವುದು ಮಾಮೂಲಿ ವಿಚಾರವಲ್ಲ. ಆದರೆ ದಕ್ಷಿಣ ಕನ್ನಡದ ಬಂಟ್ವಾಳದ ವಿಟ್ಲ ನಿವಾಸಿ ಮುಸ್ಲಿಂ ಹುಡುಗಿ ಅರ್ಷಿಯಾ ಅವರು ಇತ್ತೀಚೆಗೆ ಯಕ್ಷಗಾನಕ್ಕೆ ಸೇರಿ ಸಾಕಷ್ಟು ಪ್ರದರ್ಶನಗಳನ್ನು ನೀಡಿದ್ದು, ಜನಪ್ರಿಯ ಕಲಾವಿದರು ಎಂದೇ ಹೆಸರುವಾಸಿಯಾಗಿದ್ದಾರೆ.

ಪ್ರಸ್ತುತ ಇವರು ಆಟೋಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅರ್ಷಿಯಾ ಅವರು ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನೂರಿನಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದಿಂದ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದಾರೆ. ಅಂದಿನಿಂದ ಅರ್ಷಿಯಾ ಅವರು ಯಕ್ಷಗಾನ ಕಲಾ ಪ್ರಕಾರ, ಪಾತ್ರ, ಚೆಂಡೆ ಧ್ವನಿಯಿಂದ ಆಕರ್ಷಿತರಾಗಿದ್ದು, ಈ ಮೂಲಕ ಕಲಾಪ್ರಕಾರವನ್ನು ಕಲಿಯಲು ಇಚ್ಚಿಸಿದ್ದರು.

10ನೇ ವಯಸ್ಸಿನಲ್ಲಿ ತನ್ನೂರಾದ ವಿಟ್ಲದಲ್ಲಿ ಯಕ್ಷಗಾನವನ್ನು ಪ್ರಾರಂಭಿಸಿದ್ದು, ಶಾಲೆಯ ವಾರ್ಷಿಕೋತ್ಸವದ ಸಂದರ್ಭ ಶಾಲಾ ಶಿಕ್ಷಕಿಯೊಬ್ಬರು ತನಗೆ ಯಕ್ಷಗಾನವನ್ನು ಕಲಿಸಿದ್ದರು ಎಂದು ಅರ್ಷಿಯಾ ನೆನಪಿಸಿಕೊಳ್ಳುತ್ತಾರೆ. ಅರ್ಷಿಯಾ ಶ್ರೀದೇವಿ ಮಹಾತ್ಮೆ ಪ್ರಸಂಗ, ನಿಶಂಭಾಸುರ, ರಕ್ತಬೀಜಾಸುರ ಹಾಗೂ ಮಹಿಷಾಸುರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯದ ಯುವತಿ ಹಿಂದೂ ಧಾರ್ಮಿಕ ಪುರಾಣಗಳನ್ನು ಕರಗತ ಮಾಡಿಕೊಂಡು ಯಕ್ಷಗಾನ ಪಾತ್ರ ಮಾಡಿದ್ದು ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *