ಪೊಲೀಸರ ಮೇಲೆ ಅಟ್ಯಾಕ್- ಫೈರಿಂಗ್‍ಗೆ ಸ್ಲಂ ಭರತ್ ಸಾವು

Public TV
2 Min Read

– ತಪ್ಪಿಸಿಕೊಳ್ಳುತ್ತಿದ್ದಾಗ ಗುಂಡು ಹಾರಿಸಿದ್ದ ಪೊಲೀಸರು
– ಪೊಲೀಸರಿಗೆ ಕಚ್ಚಿ ತಪ್ಪಿಸಿಕೊಳ್ಳಲು ಯತ್ನ

ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ನಂತರ ಅಪರಾಧ ಲೋಕಕ್ಕೆ ನಾನೇ ಅಧಿಪತಿ ಎಂದು ಮೆರೆಯುತ್ತಿದ್ದ ರೌಡಿ ಶೀಟರ್ ಸ್ಲಂ ಭರತ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಕುಖ್ಯಾತ ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತ ತಪ್ಪಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸೋಲದೇವನಹಳ್ಳಿ ಬಳಿ ಘಟನೆ ನಡೆದಿದ್ದು, ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಭರತ್‍ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭರತ್ ಸಾವನ್ನಪ್ಪಿದ್ದಾನೆ.

ರೌಡಿಶೀಟರ್ ಸ್ಲಂ ಭರತ್ ನನ್ನ ಮುರದಾಬಾದ್‍ನಿಂದ ಕರೆತರುತ್ತಿದ್ದ ವಿಷಯ ತಿಳಿದು ಆರೋಪಿಯ ಗ್ಯಾಂಗ್, ಪೀಣ್ಯ ಬಳಿ ಎರಡು ಕಾರಿನಲ್ಲಿ ಬಂದು ಪೊಲೀಸರನ್ನು ಅಡ್ಡಗಟ್ಟಿತ್ತು. ಒಂದು ಟಾಟಾ ಸುಮೊ ಮತ್ತು ಜೆನ್ ಕಾರಿನಲ್ಲಿ ಬಂದು ಪೊಲೀಸರ ಮೇಲೆ ಅಟ್ಯಾಕ್ ಮಾಡಿತ್ತು. ಅಲ್ಲದೆ ಪೊಲೀಸರ ಮೇಲೆ ಫೈರಿಂಗ್ ಸಹ ಮಾಡಿತ್ತು. ಬಳಿಕ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿತ್ತು. ಈ ವೇಳೆ ಸಿಬ್ಬಂದಿ ಸುಭಾಷ್ ಗಾಯಗೊಂಡಿದ್ದರು.

ಅಲ್ಲದೆ ಪೊಲೀಸರಿಗೆ ಕಚ್ಚಿ ರೌಡಿ ಶೀಟರ್ ಸ್ಲಂ ಭರತ್ ಎಸ್ಕೇಪ್ ಆಗಿದ್ದ, ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಡಿಸಿಪಿ ನಿಶಾಜೇಮ್ಸ್ ಎಸ್ಕೇಪ್ ಅದ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅಲ್ಲದೆ ನಗರದ ಎಲ್ಲ ಹೊರ ವಲಯದಲ್ಲಿ ನಾಕಾ ಬಂಧಿ ಹಾಕಿ ತಪಾಸಣೆ ನಡೆಸಲಾಗುತ್ತಿತ್ತು.

ಸಿನಿಮಾ ಶೈಲಿಯಲ್ಲಿ ಅಟ್ಯಾಕ್:
ಇಂತಹದ್ದೊಂದು ದಾಳಿ ನಡೆಯುತ್ತದೆ ಎಂದು ಪೊಳೀಸರು ನಿರೀಕ್ಷಿಸಿರಲಿಲ್ಲ. ಗ್ಯಾಂಗ್ ಸಿನಿಮಾ ಶೈಲಿಯಲ್ಲಿ ಬಂದು ಅಟ್ಯಾಕ್ ಮಾಡಿತ್ತು. ಘಟನೆ ನಂತರ ಪೊಲೀಸರು ತೀವ್ರ ಶೋಧ ನಡೆಸಿದ್ದು, ಈ ವೇಳೆ ಸೋಲದೇವನಹಳ್ಳಿ ಬಳಿ ಸ್ಲಂ ಭರತ್ ಮೇಲೆ ಗುಂಡು ಹಾರಿಸಿ, ಬಂಧಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಭರತ್ ಸಾವನ್ನಪ್ಪಿದ್ದಾನೆ. ರಾಜಗೋಪಾನಗರ ಇನ್ಸ್ ಪೆಕ್ಟರ್ ರಿಂದ ಶೂಟೌಟ್ ನಡೆದಿದ್ದು, ರೌಡಿ ಭರತನ ಹೊಟ್ಟೆಗೆ ಗುಂಡು ತಗುಲಿತ್ತು. ಹೀಗಾಗಿ ಸಾವನ್ನಪ್ಪಿದ್ದಾನೆ.

ಮುರದಾಬಾದ್‍ನಲ್ಲಿ ಭರತ್ ಬಂಧನ
ರೌಡಿ ಲಕ್ಷ್ಮಣ ಕೊಲೆಯಾದ ನಂತರ ಎಲ್ಲ ಡೀಲ್ ಗಳು ನನಗೇ ಬರಬೇಕು, ನಾನೇ ಎಲ್ಲ ಡೀಲ್ ಗಳನ್ನು ಮಾಡುತ್ತೇನೆ ಎಂದು ಲಕ್ಷ್ಮಣ ಮಾಡುತ್ತಿದ್ದ ವ್ಯವಹಾರಗಳಿಗೆ ಭರತ್ ಕೈ ಹಾಕಿದ್ದ. ಅಲ್ಲದೆ ಹಫ್ತಾ ವಸೂಲಿಗೆ ಇಳಿದಿದ್ದ, ಅಲ್ಲದೆ ಈ ಹಿಂದೆ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ವಾಹನ ಹತ್ತಿಸೋಕೆ ಬಂದು ಎಸ್ಕೇಪ್ ಆಗಿದ್ದ. ಹೀಗಾಗಿ ಸ್ಲಂ ಭರತ್‍ನನ್ನು ಉತ್ತರ ಪ್ರದೇಶದ ಮುರದಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದರು.

ಸ್ಲಂ ಭರತ್ ತನ್ನ ಗೆಳತಿಯೊಂದಿಗೆ ಮುರದಾಬಾದ್ ನಲ್ಲಿ ಇರುವ ವಿಚಾರ ತಿಳಿದ ಬೆಂಗಳೂರು ಪೊಲೀಸರು ಉತ್ತರ ಪ್ರದೇಶದ ಮುರದಾಬಾದ್ ಗೆ ತೆರಳಿದ್ದರು. ಈ ವೇಳೆ ಪೊಲೀಸರನ್ನು ರೌಡಿಗಳು ಎಂದು ಬಿಂಬಿಸಿದ ಸ್ಲಂ ಭರತ್ ಸುಮಾರು 300ಕ್ಕೂ ಹೆಚ್ಚು ರೌಡಿಗಳನ್ನು ಬಳಸಿಕೊಂಡು ಪೊಲೀಸರ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆದು ಸ್ಲಂ ಪೊಲೀಸರು ಭರತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಬೆಂಗಳೂರಿನಲ್ಲೇ ಸ್ಲಂ ಭರತ್‍ನ ಮೇಲೆ 50ಕ್ಕೂ ಹೆಚ್ಚು ಕೇಸುಗಳು ದಾಖಲಾಗಿದ್ದು, ಕಳೆದ ತಿಂಗಳಲ್ಲಿ ರಾಜಗೋಪಾಲ ನಗರದ ಶ್ರೀನಿವಾಸ ಅವರು ಹಫ್ತಾ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳನ್ನು ಜಖಂ ಮಾಡಿಸಿದ್ದ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸ್ಲಂ ಭರತನಿಗಾಗಿ ಹುಡುಕಾಟ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *