ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

Public TV
2 Min Read

– ಸಂಯಮ ಕಾಪಾಡುವಂತೆ ಮೋದಿ ಮನವಿ
– ಪ್ರಧಾನಿ, ಶಾ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ

ನವದೆಹಲಿ: ಹಿಂಸಾಚಾರ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ಛೀಮಾರಿ ಹಾಕಿವೆ.

1984ರ ಸಿಖ್ ದಂಗೆಯಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಅಂತ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗ್ತಿರೋ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ಕ್ಲಿಪ್ಪಿಂಗ್ಸ್ ಗಳನ್ನು ಕೋರ್ಟ್ ನಲ್ಲಿ ಪ್ಲೇ ಮಾಡಲಾಯಿತು.

ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡೋವ್ರ ಮೇಲೆ ಎಫ್‍ಐಆರ್ ಹಾಕೋ ನೀವ್ಯಾಕೆ ಇಂಥ ಹೇಳಿಕೆ ಕೊಡೋವ್ರ ಮೇಲೆ ಹಾಕಲ್ಲ. ಸಮಾಜಕ್ಕೆ ತಪ್ಪು ಸಂದೇಶ ಹೋಗಲ್ವಾ ಅಂತ ಪೊಲೀಸರನ್ನು ಪ್ರಶ್ನಿಸಿದ್ರು.

ಇದಕ್ಕೆ ಉತ್ತರಿಸಿದ ದೆಹಲಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಪೊಲೀಸರೇನು ಪಿಕ್‍ನಿಕ್‍ಗೆ ಹೋಗಿರಲಿಲ್ಲ. ಅವರ ಮೇಲೂ ಆ್ಯಸಿಡ್ ದಾಳಿಗಳು ನಡೆದಿವೆ ಎಂದರು

ಇನ್ನೊಂದು ಕಡೆ ನಿಮ್ಮಲ್ಲಿ ವೃತ್ತಿಪರತೆ ಇಲ್ಲವೇ? ಅಂತ ದೆಹಲಿ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತ ಆಗಿದ್ರೆ ಇಷ್ಟು ಹಾನಿಯನ್ನು ತಡೆಯಬಹುದಿತ್ತು. ಇದು ನಿಮ್ಮ ವಿಫಲತೆಯನ್ನು ತೋರಿಸ್ತಿದೆ ಅಂತ ಜಡ್ಜ್ ಕೆ.ಎಂ. ಜೋಸೆಫ್ ಬಿಸಿಮುಟ್ಟಿಸಿದ್ದಾರೆ.

ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಯಾರಿಗಾಗಿ ಕಾಯುತ್ತಾ ಕೂತಿದ್ದೀರಿ ಅಂತ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ಹೈಕೋರ್ಟೇ ತೀರ್ಮಾನ ಕೈಗೊಳ್ಳಲಿದೆ ಅಂತ ಸುಪ್ರೀಂಕೋರ್ಟ್ ಹೇಳಿದೆ.

ಮೋದಿ ಮನವಿ:
ಶಕ್ತಿಕೇಂದ್ರದಲ್ಲೇ ಸೃಷ್ಟಿಯಾಗಿರೋ ಇಂಥಾ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

ಇನ್ನು,ಸಾವು-ನೋವಿನಲ್ಲೂ ರಾಜಕೀಯ ಕೆಸರೆರಚಾಟ ನಡೀತಿದೆ. ಇಷ್ಟೆಲ್ಲಾ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಗೃಹ ಸಚಿವರೇ ನೇರಹೊಣೆ. ಅವರು ಎಲ್ಲೋಗಿದ್ರು. ಈ ಕ್ಷಣವೇ ರಾಜೀನಾಮೆ ಕೊಡ್ಬೇಕು ಅಂತ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ರು.

ದ್ವೇಷ ಭಾಷಣಗಳ ಮೂಲಕ ಉದ್ದೇಶ ಪೂರ್ವಕವಾಗಿಯೇ ದೆಹಲಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗ್ತಿದೆ ಅಂತ ದೂರಿದ್ರು. ನಾಳೆ ಪ್ರತಿಭಟನೆ ಮಾಡಲಿರುವ ಕಾಂಗ್ರೆಸ್, ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ಆದರೆ, ಸೋನಿಯಾ ಗಾಂಧಿ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದರು.

ಸೋನಿಯಾ ಗಾಂಧಿ ಅವರ ಹೇಳಿಕೆ ದುರಾದೃಷ್ಟ. ಖಂಡನೀಯ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿ ಕಾಪಾಡುವಂತೆ ಮನವಿ ಮಾಡ್ಬೇಕು. ಅದನ್ನು ಬಿಟ್ಟು ಸರ್ಕಾರವನ್ನು ನಿಂದಿಸೋದು, ಕೊಳಕು ರಾಜಕೀಯ ಸರಿಯಲ್ಲ ಅಂದ್ರು. ಈ ಮಧ್ಯೆ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಎನ್‍ಸಿಪಿಯ ಸುಪ್ರಿಯಾ ಸುಳೆ ಹೇಳಿದ್ರೆ, ದೆಹಲಿಯಲ್ಲಿ ಸೇನೆಯ ನಿಯೋಜನೆ ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಸಿಪಿಎಂ ಸೀತಾರಾಂ ಯೆಚೂರಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *