ಶಾಂತಿ ಪಾಲನೆಗೆ ದೆಹಲಿ ರಸ್ತೆಗಿಳಿದ ಜೇಮ್ಸ್ ಬಾಂಡ್ ದೋವಲ್

Public TV
2 Min Read

ನವದೆಹಲಿ: ಪೌರತ್ವ ಕಾಯಿದೆ ಪರ ಮತ್ತು ವಿರೋಧಿ ಹಿಂಸಾಚಾರದಿಂದಾಗಿ ದೆಹಲಿ ಧಗಧಗಿಸ್ತಿದೆ. ಕ್ಷಣಕ್ಷಣಕ್ಕೂ ಹೊತ್ತಿ ಉರೀತಿದೆ. ಸಾವಿನ ಸಂಖ್ಯೆ ಏರಿಕೆ ಆಗ್ತಲೇ ಇದೆ. ಕರ್ಫ್ಯೂ, ನಿಷೇಧಾಜ್ಞೆ ಹೇರಿದ್ದರೂ, ಸಿ.ಆರ್.ಪಿ.ಎಫ್ ಸೇರಿದಂತೆ 800 ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಿದರೂ ಕೂಡ ಪರಿಸ್ಥಿತಿ ಸುಧಾರಿಸ್ತಿಲ್ಲ.

ಪ್ರಧಾನಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಆತಂಕ ಹೆಚ್ಚಾಗಿದ್ದರೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಧೃತಿಗೆಟ್ಟಿಲ್ಲ. ಭಾರತದ ಜೇಮ್ಸ್ ಬಾಂಡ್ ಅಂತಲೇ ಹೆಸರಾಗಿರೋ ದೋವಲ್, ಹಿಂಸಾಚಾರ ನಿಯಂತ್ರಣದ ಹೊಣೆ ಹೊತ್ತಿದ್ದಾರೆ. ಜೀವದ ಹಂಗು ತೊರೆದು ಈಶಾನ್ಯ ದೆಹಲಿ ಹಿಂಸಾಚಾರದ ಕೇಂದ್ರ ಸ್ಥಾನಗಳಾದ ಸೀಲಂಪುರ, ಜಾಫ್ರಾಬಾದ್, ಮೌಜ್‍ಪುರ್, ಭಜನ್‍ಪುರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭದ್ರತೆಯ ಇಂಚಿಂಚೂ ಮಾಹಿತಿ ಪಡೆಯುವ ಜೊತೆಗೆ ಭೀತಿಗೊಂಡಿದ್ದ ಸ್ಥಳೀಯರಲ್ಲಿ ಧೈರ್ಯ ತುಂಬಿದ್ದಾರೆ. ಯಾರೂ ಭಯಪಡುವ ಅವಶ್ಯಕತೆಯೇ ಇಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಅಂತ ಹೇಳಿದರು. ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಶಾಂತಿ ಪುನರ್ ಸ್ಥಾಪಿಸಲು ಅಗತ್ಯ ಸೂಚನೆ ರವಾನಿಸಿದ್ದಾರೆ.

ಈ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರು ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು. ಭೇಟಿ ಬಳಿಕ ಗೃಹ ಸಚಿವ ಅಮಿತ್ ಶಾಗೆ ವರದಿ ಸಲ್ಲಿಸಿದ್ರು. ಅಂದಹಾಗೆ, ಆರ್ಟಿಕಲ್ 370 ರದ್ದಾದ ಬಳಿಕ ಈ ಹಿಂದೆ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿದ್ದ ಡೇರ್ ಡೆವಿಲ್ ದೋವಲ್, ಅಲ್ಲಿನ ಸ್ಥಳೀಯರ ಜೊತೆ ಚರ್ಚೆ ನಡೆಸಿದ್ದರು.

ಸಾವಿನ ಸಂಖ್ಯೆ 22ಕ್ಕೆ ಏರಿಕೆ:
ಸತತ 4 ದಿನವೂ ದೆಹಲಿ ಹೊತ್ತಿ ಉರಿದಿದೆ. ಇದುವರೆಗೆ ಹಿಂಸಾಚಾರಕ್ಕೆ 22 ಮಂದಿ ಬಲಿಯಾಗಿದ್ದಾರೆ. ಈಶಾನ್ಯ ದೆಹಲಿಯಲ್ಲಿ ನಿನ್ನೆ ರಾತ್ರಿ 13ರಲ್ಲಿದ್ದ ಸಾವಿನ ಸಂಖ್ಯೆ ಇವತ್ತು 22ಕ್ಕೆ ಏರಿದೆ. 200ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹಿಂಸಾಚಾರದ ಕೇಂದ್ರ ಬಿಂದುವಾಗಿರುವ ಸೀಲಂಪುರದಲ್ಲಿ ಮುಂದಿನ 1 ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.

ಹಿಂಸಾಚಾರ ನಿಯಂತ್ರಣಕ್ಕಾಗಿ 45 ಪ್ಯಾರಾಮಿಲಿಟರಿ ತುಕಡಿಗಳು ಸಿ.ಆರ್.ಪಿ.ಎಫ್, ಸಶಸ್ತ್ರ ಸೀಮಾ ಬಲ, ಸಿಐಎಸ್‍ಎಫ್ ಸೇರಿದಂತೆ 800 ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಗೋಕುಲ್ ಪುರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಪರೇಡ್ ನಡೆಸಿ, ಜನತೆಯಲ್ಲಿ ಧೈರ್ಯ ತುಂಬಿವೆ. ಇನ್ನು, ಇಲ್ಲಿವರೆಗೆ 200 ಪೇಷಂಟ್ಸ್ ಗೆ ಚಿಕಿತ್ಸೆ ಕೊಟ್ಟಿದ್ದೇವೆ ಅಂತ ಜಿಟಿಬಿ (ಗುರು ತೇಗ್ ಬಹದ್ದೂರ್) ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿ ನೋವಿನಿಂದಾಗಿ ಗೋಳಾಟ ಆರ್ತನಾದ ಹೇಳತೀರದಾಗಿದೆ. ಈ ಮಧ್ಯೆ, ಇಲ್ಲಿವರೆಗೆ 18 ಎಫ್‍ಐಆರ್ ದಾಖಲಾಗಿದ್ದು, 106 ಜನರನ್ನು ವಶಕ್ಕೆ ಪಡೆಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *