– ಮನೋರೋಗದಿಂದ ಬಳಲುತ್ತಿದ್ದ ತಂದೆ
– ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಚೆನ್ನೈ: ತನ್ನ 4 ವರ್ಷದ ಮಗಳನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಕಟ್ಟಡದಿಂದ ಹಾರಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ತಂದೆ-ಮಗಳು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತಿರುಪತಿ ರೆಡ್ಡಿ(35) ಹಾಗೂ ಈತನ ಮಗಳನ್ನು ಹಾರಿಕ ಎಂದು ಗುರುತಿಸಲಾಗಿದೆ. ಈ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧವರಂನ ಪೊನ್ನೈಮಾನ್ ಮೆಡು ಎಂಬಲ್ಲಿ ನಡೆದಿದೆ. ಮನೋರೋಗದಿಂದ ಬಳಲುತ್ತಿದ್ದ ತಿರುಪತಿ ರೆಡ್ಡಿ ಎರಡು ಅಂತಸ್ತಿನ ಮನೆಯಿಂದ ತನ್ನ ಮಗಳನ್ನು ಹಿಡಿದುಕೊಂಡು ಹಾರಿದ್ದಾನೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ತಿರುಪತಿ ರೆಡ್ಡಿ ತನ್ನ ಮಗಳನ್ನು ಹಿಡಿದುಕೊಂಡು ಮನೆಯ ಮಹಡಿಗೆ ತೆರಳಿದ್ದಾನೆ. ಅಲ್ಲದೆ ನೋಡನೋಡುತ್ತಿದ್ದಂತೆಯೇ ಬಾಲ್ಕಿನಿಯಿಂದ ಹಾರಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆ-ಮಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಾಧವಪುರಂ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಸೋಮವಾರ ಮೃತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಡೆತ್ ನೋಟ್ ಕೂಡ ಲಭ್ಯವಾಗಿದೆ. ಬೆಳ್ಳುಳ್ಳಿ ಗೋಡಾನ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ತಿರುಪತಿ ರೆಡ್ಡಿ ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಈ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಹೀಗಾಗಿ ಕೆಲಸ ಬಿಟ್ಟು ಮನೆಯಲ್ಲಿ ಇದ್ದನು. ಸದ್ಯ ತಿರುಪತಿ ರೆಡ್ಡಿ ಪತ್ನಿ ಹಾಗೂ 5 ವರ್ಷದ ಮಗನನ್ನು ಅಗಲಿದ್ದಾನೆ.