ಕಾವೇರಿ ನದಿಗೆ ಸೇತುವೆ ನಿರ್ಮಿಸುವಂತೆ ಮಾದಪ್ಪನ ಭಕ್ತರ ಒತ್ತಾಯ

Public TV
2 Min Read

ಚಾಮರಾಜನಗರ: ಮಲೆ ಮಹದೇಶ್ವರನ ದರ್ಶನಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ನಡೆದೆ ಬರುತ್ತಾರೆ. ಅಪಾಯಕಾರಿಯಾಗಿ ಹರಿಯುತ್ತಿರೋ ಕಾವೇರಿ ನದಿಯನ್ನು ಲೆಕ್ಕಿಸದೆ ನಡೆದೆ ಹೋಗುತ್ತಾರೆ. ಒಬ್ಬಿಬ್ಬರಲ್ಲ ಲಕ್ಷಾಂತರ ಮಂದಿ ನದಿಯನ್ನು ದಾಟುತ್ತಾರೆ. ಹೀಗಾಗಿ ಕಾವೇರಿ ನದಿಗೆ ಸೇತುವೆ ಮಾಡಬೇಕೆಂಬುದು ಭಕ್ತರ ಬೇಡಿಕೆಯಾಗಿದ್ದು, ಅವರ ಬೇಡಿಕೆ ಈಡೇರುತ್ತಾ? ಅವರು ನಡೆದು ಹೋಗುವುದು ಯಾವ ಪವಾಡ ಪುರುಷ ಮಹದೇಶ್ವರನ ಭಕ್ತರ ಅಳಲು ಈಡೇರುತ್ತಾ ಅಂತ ಕಾಯುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಾಡ ಪುರುಷ ಮಲೆ ಮಹದೇಶ್ವರನ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಅದರಲ್ಲೂ ಶಿವರಾತ್ರಿ ದಿನವಾದ ಇಂದು ಎತ್ತ ನೋಡಿದರು ಜನ ಸಾಗರವೇ ಕಾಣಸಿಗುತ್ತದೆ. ಎಲ್ಲಿ ಹೋದರು ಹರ ಹರ ಮಹದೇವನ ಸದ್ದು ಜೋರಾಗಿದೆ. ಇಂತಹ ಮಲೆ ಮಾದಪ್ಪನ ದರ್ಶನಕ್ಕೆ ಕಾಡು-ಮೇಡು, ನದಿ ಲೆಕ್ಕಿಸದೆ ಜೀವ ಕೈಲಿಡಿದು ಲಕ್ಷಾಂತರ ಮಂದಿ ಭಕ್ತರು ನಡೆದು ಬರೋದನ್ನ ನೋಡಿದರೆ ಎಲ್ಲರಿಗೂ ಅಚ್ಚರಿಯಾಗುತ್ತೆ. ಅದರಲ್ಲೂ ಕೂಡ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳ ಜನರು ಮಾದಪ್ಪನಿಗೆ ಹರಕೆ ಹೊತ್ತು ಕಾಲ್ನಡಿಗೆಯಲ್ಲಿ ಸನ್ನಿದಾನಕ್ಕೆ ಬಂದು ಹರಕೆ ತೀರಿಸುತ್ತಾರೆ.

ರಾಮನಗರ ಜಿಲ್ಲೆಯ ಸಂಗಮ ಸಮೀಪದಲ್ಲಿರುವ ಮೇಕೆದಾಟು ಮೂಲಕ ರಭಸವಾಗಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಪ್ರಾಣದ ಹಂಗು ತೊರೆದು ನದಿಯಲ್ಲಿ ನಡೆದು ಭಕ್ತರು ಮಲೆ ಮಾದಪ್ಪನ ದರ್ಶನಕ್ಕೆ ಬರುತ್ತಾರೆ. ಸುಮಾರು 150ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸಿ ಕಾಲ್ನಡಿಗೆಯಲ್ಲಿ ಬರುವುದರಿಂದ ಒಂದು ಸೇತುವೆ ನಿರ್ಮಣ ಮಾಡೋದು ಒಳ್ಳೆಯದು ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಇದೀಗ ಮಾದಪ್ಪನ ದರ್ಶನಕ್ಕೆ ನಡೆದು ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸರ್ಕಾರ, ಜಿಲ್ಲಾಡಳಿತ ಇತ್ತ ಗಮನಹರಿಸಿ ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದೇವಸ್ಥಾನದ ಸಿಬ್ಬಂದಿ, ಹಲವು ವರ್ಷಗಳಿಂದಲೂ ಜನರು ಮಾದಪ್ಪನ ದರ್ಶನಕ್ಕೆ ನಡೆದು ಬರುತ್ತಿರುವುದು ನಮಗೂ ಕೂಡ ಅರಿವಿದೆ. ಆದರೆ ಅವರು ನಡೆದು ಬರುತ್ತಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಹೀಗಾಗಿ ಸೇತುವೆ ನಿರ್ಮಾಣಕ್ಕೆ ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಮರ್ಷಿಯಲ್ ದೃಷ್ಟಿಯಿಂದಲೂ ಕೂಡ ಮಾದಪ್ಪನ ಬೆಟ್ಟಕ್ಕೆ ಆ ಮಾರ್ಗದಲ್ಲಿ ರಸ್ತೆ, ಸೇತುವೆ ಮಾಡುವುದು ಒಳ್ಳೆಯದು. ಆದರೆ ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದರಿಂದ ಅಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆಗ್ತಿಲ್ಲ. ಅರಣ್ಯ ಇಲಾಖೆ ಒಪ್ಪಿದರೆ ಸೇತುವೆ ನಿರ್ಮಾಣ ಮಾಡುವ ಕುರಿತು ಸರ್ಕಾರದ ಜೊತೆ ಚರ್ಚಿಸಲಾಗುವುದು. ಜೊತೆಗೆ ರಸ್ತೆ ಕೂಡ ನಿರ್ಮಾಣ ಮಾಡುವುದರಿಂದ ಪ್ರವಾಸೋದ್ಯಮ ಕೂಡ ಬೆಳೆಯುತ್ತೆ ಎನ್ನುತ್ತಿದ್ದಾರೆ.

ಈ ಲಕ್ಷಾಂತರ ಭಕ್ತರ ಕೂಗು ಆಲಿಸಿ ಸೇತುವೆ ನಿರ್ಮಾಣ ಮಾಡಿದರೆ ಸಾಕು ಪ್ರವಾಸೋದ್ಯಮ ಅಭಿವೃದ್ದಿಯಾಗುತ್ತೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮತ್ತಷ್ಟು ಭಕ್ತರು ಮಾದಪ್ಪನ ದರ್ಶನಕ್ಕೆ ಹೋಗುತ್ತಾರೆ. ಇನ್ನಾದರು ಸರ್ಕಾರ ಈ ಬಗ್ಗೆ ಎಚ್ಚೆತ್ತು ಸೇತುವೆ ನಿರ್ಮಾಣ ಮಾಡ್ತಾರಾ ಅನ್ನೊದೆ ಸದ್ಯದ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *