ದರ್ಶನ್ ನಂತ್ರ ಕಿಲ್ಲರ್ ವೆಂಕಟೇಶ್‍ಗೆ ಸೃಜನ್‍ ಸಹಾಯ

Public TV
2 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಂತರ ನಟ ಸೃಜನ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

ಸೃಜನ್ ಲೋಕೇಶ್ ಅವರು ಕಿಲ್ಲರ್ ವೆಂಕಟೇಶ್ ಅವರ ಚಿಕಿತ್ಸೆಗಾಗಿ 50 ಸಾವಿರ ರೂ. ನೀಡಿದ್ದಾರೆ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ, “ಧನ್ಯವಾದಗಳು ಸೃಜನ್ ಲೋಕೇಶ್, ಕಿಲ್ಲರ್ ವೆಂಕಟೇಶ್ ಕಲಾಬಂಧುವಿನ ಕಷ್ಟಕ್ಕೆ ಸ್ಪಂದಿಸಿದಕ್ಕೆ. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ” ಎಂದು ಟ್ವೀಟ್ ಮಾಡಿದ್ದಾರೆ.

ಅನಾರೋಗ್ಯದ ಕಾರಣ ಕಿಲ್ಲರ್ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಕ್ಷಣ ಅವರ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ಜಗ್ಗೇಶ್ ಸಹಾಯ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಕಿಲ್ಲರ್ ವೆಂಕಟೇಶ್ ಅನಾರೋಗ್ಯದ ಬಗ್ಗೆ ಜಗ್ಗೇಶ್ ಅವರು ದರ್ಶನ್ ಅವರಿಗೆ ತಿಳಿಸಿದ್ದರು ಜಗ್ಗೇಶ್ ಫೋನ್‍ಗೆ ತಕ್ಷಣ ಪ್ರತಿಕ್ರಿಯಿಸಿದ ದರ್ಶನ್, ಒಂದು ಲಕ್ಷ ಹಣ ಕಳುಹಿಸಿದ್ದಾರೆ. ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು.

ಕಿಲ್ಲರ್ ವೆಂಕಟೇಶ್ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ ಅವನ ಚಿಕಿತ್ಸೆಗೆ 1 ಲಕ್ಷ ರೂ. ಕಳಿಸಿದ ಕಲಾಬಂಧು. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು. ನಿನ್ನ ಶ್ರೇಷ್ಠಗುಣ ನನ್ನ ಹೃದಯದಲ್ಲಿ ಅಚ್ಚಾಯಿತು. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ ಎಂದು ಜಗ್ಗೇಶ್ ಬರೆದುಕೊಂಡಿದ್ದರು. ಅಲ್ಲದೆ “ವಿಕ್ಟೋರಿಯಾ ಆಸ್ಪತ್ರೆಯ ಡಾ.ಗಿರೀಶ್ ಮತ್ತು ಅವರ ವಿಶೇಷ ತಂಡ ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಧನ್ಯವಾದಗಳು. ನನ್ನ ಕರೆಗೆ ಸ್ಪಂದಿಸಿದ ಕಲಾಬಂಧು ದರ್ಶನ ಅವರಿಗೆ, ಸಾ.ರಾ ಬಾಮಾ ಹರೀಶ್ ಮಾಧ್ಯಮ ಮಿತ್ರರಿಗೆ” ಎಲ್ಲರಿಗೂ ಅಭಿನಂದನೆ ತಿಳಿಸಿದ್ದರು.

ಜೊತೆಗೆ “ಮಾಧ್ಯಮಮಿತ್ರರೆ, ಕಲಾಭಿಮಾನಿಗಳೇ, ಸಹೃದಯರೇ 35 ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ, ಯಕೃತ್ ಕಸಿಗೆ ತುಂಬಾ ದೊಡ್ಡ ಮೊತ್ತ ಆಗುತ್ತದೆ ಹಾಗಾಗಿ ವಿನಂತಿ” ಎಂದು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಜೊತೆಗೆ ಚಿಕಿತ್ಸೆಗೆ ಹಣದ ಅವಶ್ಯಕತೆ ಕೂಡ ಇದೆ. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಹಣ ಕಟ್ಟಲು ಪರದಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *