ಬೆತ್ತಲಾಗಿ ದೇಗುಲಕ್ಕೆ ಬಂದ 10 ಸಾವಿರ ಭಕ್ತಾದಿಗಳು

Public TV
2 Min Read

– ಹಡಕಾ ಮತ್ಸುರಿ ಹಬ್ಬದಲ್ಲಿ ವಿಚಿತ್ರ ಆಚರಣೆ

ಟೋಕಿಯೋ: ಜಗತ್ತಿನಾದ್ಯಂತ ಚಿತ್ರ ವಿಚಿತ್ರ ಸಂಪ್ರದಾಯ, ಆಚರಣೆಗಳನ್ನು ಪಾಲಿಸುವ ಸಮುದಾಯ, ಜನರು ಇರುತ್ತಾರೆ. ಅದರಲ್ಲೂ ಕೆಲ ವಿಚಿತ್ರ ಪದ್ಧತಿ, ಆಚರಣೆಗಳು ಹೆಚ್ಚು ಸದ್ದು ಮಾಡುತ್ತವೆ. ಅದರಲ್ಲಿ ಬೆತ್ತಲಾಗಿ ದೇಗುಲಕ್ಕೆ ತೆರಳಿ ಪೂಜೆ ಮಾಡುವ ಆಚರಣೆ ಕೂಡ ಒಂದಾಗಿದೆ.

ಜಪಾನ್‍ನಲ್ಲಿ ಇಂತಹ ವಿಚಿತ್ರ ಆಚರಣೆಯೊಂದನ್ನು ಜನ ಪಾಲಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿರುವ ಜಪಾನ್ ಅಂತಹ ರಾಷ್ಟ್ರದಲ್ಲೂ ಇಂತಹ ವಿಚಿತ್ರ ಆಚರಣೆ ನಡೆಯುತ್ತದೆ ಎಂದರೆ ನಂಬಲು ಆಗಲ್ಲ. ಆದರೂ ಇದು ಸತ್ಯ.

ಇದಕ್ಕೆ ‘ಹಡಕಾ ಮತ್ಸುರಿ’ ಹಬ್ಬ ಎಂದು ಕರೆಯಲಾಗುತ್ತೆ. ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಶನಿವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೆತ್ತಲಾಗಿ ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷತೆಯಾಗಿದ್ದು, ‘ಹಡಕಾ ಮತ್ಸುರಿ’ ಹಬ್ಬಕ್ಕೆ ಬೆತ್ತಲೆ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

ಜಪಾನ್‍ನ ಓಕಾಯಾಮಾ ನಗರದಲ್ಲಿ ನಿರ್ಮಿಸಲಾಗಿರುವ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಪುರುಷ ಭಕ್ತರು ಬೆತ್ತಲಾಗಿ ಪೂಜೆ ಮಾಡಲು ಹೋಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ‘ಹಡಕಾ ಮತ್ಸುರಿ’ ಹಬ್ಬ ಆಚರಿಸಲಾಯಿತು. ಈ ಆಚರಣೆಯಲ್ಲಿ ಸುಮಾರು 10 ಸಾವಿರ ಮಂದಿ ಭಾಗಿಯಾಗಿದ್ದರು. ಈ ಹಬ್ಬದಲ್ಲಿ ಪಾಲ್ಗೊಳ್ಳುವವರು ಅತ್ಯಂತ ಕಡಿಮೆ ಬಟ್ಟೆಯನ್ನು ಮೈಮೇಲೆ ಧರಿಸುವುದು ಸಂಪ್ರದಾಯವಾಗಿದೆ. ಆದ್ದರಿಂದ ‘ಪುಂದೇಶೀ ಹಾಗೂ ತಬೀ’ ಎನ್ನುವ ಒಂದು ಪುಟ್ಟ ಬಟ್ಟೆ ತುಂಡು ಸುತ್ತಿಕೊಂಡು ಭಕ್ತರು ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

ಈ ಹಬ್ಬದಲ್ಲಿ ಪಾಲ್ಗೊಳ್ಳುವ ಭಕ್ತರು ಮೊದಲು ಸೈದಾಯೀಜಿ ಕಾನೌನೀನ್ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ. ಬಳಿಕ ಸಂಜೆ ತಣ್ಣೀರಲ್ಲಿ ಸ್ನಾನ ಮಾಡಿ, ಪುಂದೇಶೀ ಹಾಗೂ ತಬೀ ಸುತ್ತುಕೊಂಡು ಬೆತ್ತಲಾಗಿ ಮುಖ್ಯ ದೇಗುಲದ ಆವರಣಕ್ಕೆ ತೆರಳುತ್ತಾರೆ. ನಂತರ ರಾತ್ರಿ ದೇಗುಲದ ಅರ್ಚಕರು ದೇಗುಲದ ಮಹಡಿಯ ಕಿಟಕಿ ತೆರೆದು ಭಕ್ತರಿದ್ದಲ್ಲಿ ಧ್ವಜಗಳನ್ನು ಎಸೆಯುತ್ತಾರೆ.

ಅರ್ಚಕರು ಎಸೆದ ಧ್ವಜಗಳು ಯಾರಿಗೆ ಸಿಗುತ್ತದೆ ಅವರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಇದನ್ನು ಪಡೆಯಲು ಭಕ್ತರು ಹರಹಾಸ ಪಡುತ್ತಾರೆ. ಈ ಇಡೀ ಪ್ರಕ್ರಿಯೆ ಕೇವಲ 30 ನಿಮಿಷದಲ್ಲಿ ನಡೆದು ಮುಗಿಯುತ್ತದೆ. ಹೀಗೆ ಧ್ವಜಗಳನ್ನು ಹಿಡಿಯುವ ಬರದಲ್ಲಿ ಸಾಕಷ್ಟು ಮಂದಿ ಗಾಯಗೊಂಡಿರುವ ಉದಾಹರಣೆ ಕೂಡ ಇದೆ.

Share This Article
Leave a Comment

Leave a Reply

Your email address will not be published. Required fields are marked *