ಅಂಧ ಗಾಯಕಿಯರಿಗೆ ನಿರ್ಮಾಣವಾಗುತ್ತಿದೆ ಚಂದದ ಮನೆ

Public TV
3 Min Read

ತುಮಕೂರು: ತಮ್ಮ ಸುಮಧುರ ಕಂಠ ಸಿರಿಯ ಮೂಲಕ ನಾಡಿನ ಜನರ ಮನಸ್ಸು ಗೆದ್ದ ಮಧುಗಿರಿ ತಾಲೂಕಿನ ಅಂಧ ಸಹೋದರಿಯರಿಗೆ ಈಗ ಚೆಂದದ ಮನೆಯ ಭಾಗ್ಯ ಒದಗಿ ಬಂದಿದೆ.

ನವರಸನಾಯಕ ಜಗ್ಗೇಶ್ ಅಂಧ ಸಹೋದರಿಯರಿಗೆ ಮನೆ ಕಟ್ಟಿಕೊಡುವ ವಾಗ್ದಾನ ಮಾಡಿದ್ದರು. ಅದರಂತೆ ಈಗ ಮಧುಗಿರಿ ತಾಲೂಕಿನ ಡಿ.ವಿ ಹಳ್ಳಿಯಲ್ಲಿ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕೊರಟಗೆರೆ ತಾಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮನೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಗಾಯಕಿಯರ 28 ವರ್ಷದ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಇದ್ದ ಹಳೆ ಮನೆ ಇಟ್ಟಿಗೆ ಗೋಡೆ, ಕಬ್ಬಿಣದ ಬೀಮ್ ಮೇಲೆ ಚಪ್ಪಡಿ ಕಲ್ಲು ಇಟ್ಟು ನಿರ್ಮಾಣ ಮಾಡಲಾಗಿತ್ತು. ಮನೆ ಮುಂದೆ ತೆಂಗಿನ ಗರಿಯಿಂದ ಚಾವಣಿ ಮಾಡಲಾಗಿತ್ತು. ಇವೆಲ್ಲವನ್ನೂ ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ. ಇದನ್ನೂ ಓದಿ: ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

ಹೊರಗಿನ ಹಜಾರ ಸೇರಿದಂತೆ ಒಟ್ಟು 7 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿದೆ. ಅಡುಗೆ ಮನೆ, ಹಾಲ್, ಒಂದು ಕೋಣೆ ಮತ್ತು ಹೊರಗಿರುವ ಹಜಾರ ನಿರ್ಮಿಸಲು ಚಿಂತಿಸಲಾಗಿದೆ. ಮನೆ ನಿರ್ಮಾಣಕ್ಕೆ ಸುಮಾರು 5 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜಗ್ಗೇಶ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಮಲ್ಲೇಶ್, ತಾಲೂಕ್ ಅಧ್ಯಕ್ಷ ಶಿವಶಂಕರ್ ಹಾಗೂ ಕೆ.ಎನ್ ರವಿಕುಮಾರ್ ಅವರ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಕೆಲಸ ಬಿರುಸಿನಿಂದ ಸಾಗಿದೆ. ಅಭಿಮಾನಿ ಬಳಗದ ಕಾರ್ಯಕರ್ತರೇ ಶ್ರಮದಾನದ ಮೂಲಕ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಎರಡು ತಿಂಗಳಲ್ಲಿ ಹೊಸ ಮನೆ ನಿರ್ಮಾಣವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ಅಂಧ ಗಾಯಕಿಯರ ಹಿನ್ನೆಲೆ:
ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯ ಮೂವರು ಸಹೋದರಿಯರಾದ ಗೌರಮ್ಮ, ಮಂಜಮ್ಮ ಹಾಗೂ ರತ್ನಮ್ಮ ಈ ಜಗತ್ತನ್ನು ಕಣ್ಣು ಬಿಟ್ಟು ನೋಡಿಲ್ಲ. ಅಕ್ಷರ ಜ್ಞಾನ ಕೂಡ ಇವರಿಗೆ ಇಲ್ಲ. ದೇವರು ಕೊಟ್ಟ ವರ ಎಂಬಂತೆ ಸುಮಧುರ ಕಂಠವೊಂದೇ ಇವರಿಗೆ ಆಧಾರ. ಆ ಕಂಠಸಿರಿಯಿಂದ ಅಂಧ ಸಹೋದರಿಯರು ಇಂದು ನಾಡಿನ ಗಮನ ಸೆಳೆದಿದ್ದಾರೆ. ಮಧುಗಿರಿ ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಎದುರು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸುಸ್ರಾವ್ಯವಾದ ಹಾಡು ಹೇಳುವುದೇ ಇವರ ಕಾಯಕ. ಸುಮಾರು 20 ವರ್ಷಗಳಿಂದ ಹಾಡನ್ನು ಹಾಡಿ ಒಂದಿಷ್ಟು ಸಂಪಾದನೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಊರಿನಲ್ಲಿ ಮದುವೆ ಸಮಾರಂಭಗಳಲ್ಲಿ ಧ್ವನಿವರ್ಧಕಗಳಿಂದ ಬರುವ ಹಾಡು, ಅಕ್ಕಪಕ್ಕದ ಮನೆಯ ರೇಡಿಯೋದಿಂದ ಕೇಳಿ ಬರುವ ಚಿತ್ರಗೀತೆಗಳು, ಟೆಪ್ ರೆಕಾರ್ಡ್‌ಗಳಿಂದ ಮೂಡಿಬರುವ ಹಾಡನ್ನು ಕೇಳಿ ಕೇಳಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಇವರ ಹಾಡನ್ನು ಕೇಳಿದರೆ ಎಂಥವರೂ ತಲೆದೂಗಬೇಕು. ಯಾವುದೇ ವೃತ್ತಿಪರ ಹಾಡುಗಾರಗಿಂತಲೂ ಕಡಿಮೆ ಇಲ್ಲ ಇವರ ಕಂಠಸಿರಿ. ಕಳೆದ 18-20 ವರ್ಷಗಳಿಂದ ನಿರಂತರವಾಗಿ ದಂಡಿನಮಾರಮ್ಮ ದೇವಸ್ಥಾನದಲ್ಲಿ ವಾರಕ್ಕೆರಡು ಬಾರಿ ಹಾಡುತ್ತಾ ಬಂದಿದ್ದಾರೆ. ಇವರ ಹಾಡಿಗೆ ಮರುಳಾದ ಭಕ್ತಾದಿಗಳು ಒಂದಿಷ್ಟು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆ ರೂಪದ ಸಂಪಾದನೆಯೆ ಇವರ ಜೀವನದ ನಿರ್ವಹಣೆಗೆ ಸಹಾಯಕಾರಿ.

ಕುಟುಂಬದ ಹಿನ್ನೆಲೆ:
ಅಂಧ ಸಹೋದರಿಯರ ತಾಯಿ ಸಿದ್ದಮ್ಮ ಟಿಬಿ ಕಾಯಿಲೆಯಿಂದ ತೀರಿ ಹೋಗಿ 20 ವರ್ಷವಾಯಿತು. ಮೂವರು ಅಂಧ ಮಕ್ಕಳು ಹುಟ್ಟುತ್ತಿದ್ದಂತೆ ತಾಯಿ ತೀರಿ ಹೋಗಿದ್ದಾರೆ. ತಂದೆ ಅಶ್ವತ್ಥಪ್ಪ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದ. ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂವರು ಅಂಧರು. ಇನ್ನೊಬ್ಬರು ಸಹಜವಾಗಿದ್ದಾರೆ. ಇದ್ದ ಒಬ್ಬ ಗಂಡು ಮಗ ಕೂಡ ಕಾಯಿಲೆಯಿಂದ ತೀರಿ ಹೋಗಿದ್ದಾನೆ. ಮೂವರು ಅಂಧ ಸಹೋದರಿಯರಲ್ಲಿ ಹಿರಿಯ ಸಹೋದರಿ ಗೌರಮ್ಮ ಕ್ರೈಸ್ತ ಸಂಪ್ರದಾಯದ ಹಾಡನ್ನು ಹಾಡುತ್ತಾರೆ. ಹಾಗಾಗಿ ಅವರು ಸರಿಗಮಪಕ್ಕೆ ಹೋಗಿಲ್ಲ. ಕುಟುಂಬದಲ್ಲಿ ತಾಯಿ ಮತ್ತು ತಮ್ಮ ತೀರಿಹೋದಾಗ ಮಕ್ಕಳು ಅನಾಥರಾಗುತ್ತಾರೆ. ಅಜ್ಜಿ ತಿಮ್ಮಕ್ಕನ ಆರೈಕೆಯಲ್ಲಿ ಮಕ್ಕಳು ಬೆಳೆಯುತ್ತಾರೆ. ಈಗ ತಂದೆ ಅಸ್ವತ್ಥಪ್ಪ ಹಾಗೂ ಅಜ್ಜಿ ತಿಮ್ಮಕ್ಕಗೂ ದುಡಿಯಲು ಶಕ್ತಿಯಿಲ್ಲ. ಮೂವರು ಹೆಣ್ಣುಮಕ್ಕಳ ಹಾಡಿನ ಸಂಪಾದನೆಯಿಂದ ಬಂದ ಹಣವೇ ಸಂಸಾರಕ್ಕೆ ಆಧಾರ.

ದೇವಸ್ಥಾನದಲ್ಲಿ ಈ ಮೂವರು ಸಹೋದರಿಯರು ಹಾಡೋದನ್ನು ನೋಡಿ ಮಧುಗಿರಿ ತಾಲೂಕ್ ಡಳಿತ ದೇವಸ್ಥಾನದ ಎದುರಿಗೆ ಒಂದು ಪೆಟ್ಟಿಗೆ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ಆ ಪೆಟ್ಟಿಗೆಯಲ್ಲೇ ಇವರುಗಳು ಕುಳಿತು ಹಾಡುತ್ತಿದ್ದಾರೆ. ಕಳೆದ 28 ವರ್ಷದ ಹಿಂದೆ ಸರ್ಕಾರದಿಂದ ಮಂಜೂರಾದ ಪುಟ್ಟ ಗುಡಿಸಲು ಇದ್ದು ಅದು ಶೀಥೀಲಗೊಂಡಿತ್ತು. ಇದನ್ನು ಅರಿತ ನಟ ಜಗ್ಗೇಶ್ ಮನೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *