ಪಬ್ಲಿಕ್ ಟಿವಿಗಿಂದು 8ನೇ ವರ್ಷದ ಹುಟ್ಟುಹಬ್ಬ – ಹರಸಿ ಬೆಳೆಸಿದ ವೀಕ್ಷಕರಿಗೆ ಧನ್ಯವಾದ

Public TV
2 Min Read

ಬೆಂಗಳೂರು: ಜನ್ಮದಿನದ ಸಡಗರ ಅಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ? ಕಳೆದ ಎಂಟು ವರ್ಷಗಳಿಂದ ಕನ್ನಡಿಗರ ಮನೆ ಮನಗಳಲ್ಲಿ ಸ್ಥಾನ ಪಡೆದಿರೋ ವಾಹಿನಿ ನಿಮ್ಮ ಪಬ್ಲಿಕ್ ಟಿವಿ. ಸುದ್ದಿ ಜಗತ್ತಿನಿಂದ ಹಿಡಿದು, ಮ್ಯೂಸಿಕ್ ಮತ್ತು ಸಿನಿಮಾ.. ಹೀಗೆ ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿರುವ ನಮ್ಮ ವಾಹಿನಿಗಳು ಕನ್ನಡಿಗರ ನೆಚ್ಚಿನ ಚಾನೆಲ್ ಗಳು. ಇವತ್ತು ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿಗೆ ಎಂಟು ಸಂವತ್ಸರ ತುಂಬಿದ ಸಾರ್ಥಕತೆ. ನಮ್ಮನ್ನು ಹರಸಿ ಬೆಳೆಸಿದ ‘ಪಬ್ಲಿಕ್’ಗೆ ಅಂದ್ರೆ ನಿಮಗಿದೋ ಸಾಷ್ಟಾಂಗ ನಮಸ್ಕಾರ.

ಸುದ್ದಿ ಪ್ರಪಂಚ ವಿಶಾಲವಾಗಿ ಬೆಳೆಯುತ್ತಿದೆ. ನಿಷ್ಪಕ್ಷಪಾತ ಸುದ್ದಿ ಬಿತ್ತರ, ವಸ್ತು ನಿಷ್ಠ ವಿಶ್ಲೇಷಣೆ, ಮತ್ತು ಸ್ಪಷ್ಟ ಮಾಹಿತಿ ಕೊಡುವುದು ಸವಾಲಿನ ಕೆಲಸ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದ್ರೆ ಯಾವುದೇ ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ಯಾವ ಮುಲಾಜಿಲ್ಲದೇ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಚಾನೆಲ್ ನ ಅನಿವಾರ್ಯತೆ ಕನ್ನಡಿಗರಿಗಿದ್ದರೆ, ಅವರ ಆ ಅನಿವಾರ್ಯತೆಯನ್ನು ಪರಿಪೂರ್ಣವಾಗಿ ಈಡೇರಿಸೋ ಹೊಣೆ ಹೊರಲು ಸಜ್ಜಾಗಿದ್ದೇ ನಿಮ್ಮ ಪಬ್ಲಿಕ್ ಟಿವಿ.

ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.

ಓರ್ವ ನುರಿತ, ಪಾರಂಗತ ನಾಯಕನಿಲ್ಲದೆ ಲಕ್ಷ್ಯ ತಲುಪೋ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿಜಗತ್ತಿನ ಯಾನ ಎಂಟು ಸಂವತ್ಸರ ಪೂರೈಸಿ ಅಬಾಧಿತವಾಗಿ ಸಾಗಿದೆ ಅಂದ್ರೆ, ಅದಕ್ಕೆ ಕಾರಣ ರಂಗನಾಥ್ ಅವರಂಥ ಸಮರ್ಥ ನಾಯಕನ ಸಾರಥ್ಯದಲ್ಲಿ ಹೊರಟದ್ದೇ ಹೊರತು ಬೇರೇನೂ ಅಲ್ಲ.

ಸುದ್ದಿವಲಯದಲ್ಲಿ ಗೆದ್ದು ಬೀಗಿ ಲೋಕಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. ಇನ್ನು ಪಬ್ಲಿಕ್ ಟಿವಿಯ ಮತ್ತೊಂದು ಅನನ್ಯ ಕೊಡುಗೆ ಪಬ್ಲಿಕ್ ಮೂವೀಸ್. ಅಲ್ಪಕಾಲದಲ್ಲೇ ಕನ್ನಡಿಗರ ಮನೆಗೆದ್ದ ಪಬ್ಲಿಕ್ ಮೂವೀಸ್ ಎಂಬ ಕೂಸಿಗೂ ಇಂದು ಎರಡು ವರ್ಷ.

ಪಬ್ಲಿಕ್ ಟಿವಿಯ ಪ್ರತಿ ಮೈಲಿಗಲ್ಲಿನಲ್ಲೂ ಹೆಗಲಿಗೆ ಹೆಗಲು ಕೊಟ್ಟು, ಪ್ರತಿ ಹಂತದಲ್ಲೂ ನಮ್ಮನ್ನು ಹರಸಿ ಬೆಳೆಸಿದ ವೀಕ್ಷಕ ಮಹಾಪ್ರಭುಗಳಿಗೆ ಧನ್ಯವಾದ. ನಿಮ್ಮ ಸಹಕಾರ ಹೀಗೇ ಇರಲಿ. ಹಾಗೇ ಪಬ್ಲಿಕ್ ಟಿವಿಯ ಬೆಳವಣಿಗೆಗೆ ಕಾರಣರಾದ ಕೇಬಲ್ ಆಪರೇಟರ್ಸ್ ಹಾಗೂ ಜಾಹೀರಾತುದಾರರಿಗೂ ನಾವು ಚಿರಋಣಿ.

Share This Article
Leave a Comment

Leave a Reply

Your email address will not be published. Required fields are marked *