ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ವಚ್ಛತಾ ಕಾರ್ಯ

Public TV
1 Min Read

– 6 ಲಾರಿ ಬಟ್ಟೆ, 8 ಲಾರಿ ತ್ಯಾಜ್ಯ ನದಿಯಿಂದ ಹೊರಕ್ಕೆ

ಮಂಗಳೂರು: ಉಜಿರೆಯ ಶ್ರೀ ಜನಾರ್ದನ ಸೇವಾ ಸಮಿತಿಯು ಕಳೆದ ಕೆಲ ತಿಂಗಳ ಹಿಂದೆ ಆರಂಭಗೊಂಡಿದ್ದು, ಇದರ ಪ್ರಥಮ ಸೇವೆಯಾಗಿ ಧರ್ಮಸ್ಥಳದಲ್ಲಿ ಜೀವನದಿ ನೇತ್ರಾವತಿಯ ಸ್ವಚ್ಛತಾ ಕಾರ್ಯವನ್ನು 500 ಮಂದಿ ಸ್ವಯಂ ಸೇವಕರ ತಂಡದವರು ಸೇವೆಯಾಗಿ ಮಾಡಿದರು.

ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಚ್ಛತೆ ನಡೆಸಿ 6 ಲಾರಿ ಲೋಡ್ ಬಟ್ಟೆ ತ್ಯಾಜ್ಯ 2 ಲೋಡ್ ಕಟ್ಟಿಗೆ ಹಾಗೂ 8 ಲೋಡ್ ತ್ಯಾಜ್ಯವನ್ನು ನದಿಯಿಂದ ತೆಗೆದು ಸ್ವಚ್ಛಗೊಳಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ ಭೇಟಿ ನೀಡಿ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಜಿರೆಯ ಹಿರಿಯ ಸಮಾಜ ಸೇವಾಕರ್ತ ರಾಮಚಂದ್ರ ಶೆಟ್ಟಿ ಸ್ವಚ್ಛತಾ ಕಾರ್ಯವನ್ನು ಉದ್ಘಾಟಿಸಿದರು. ಶರತ್‍ಕೃಷ್ಣ ಪಡ್ವೆಟ್ನಾಯ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್, ಉಜಿರೆಯ ಉದ್ಯಮಿ ರಾಜೇಶ್ ಪೈ ಹಾಗೂ ಮೋಹನ ಕುಮಾರ್ ನೇತೃತ್ವದಲ್ಲಿ ಸ್ವಚ್ಛತಾ ಸೇವೆ ನಡೆಯಿತು.

ಆರು ನೂರು ಮಂದಿ ಸಕ್ರಿಯ ಸ್ವಯಂ ಸೇವಕರ ತಂಡ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆಯಲ್ಲಿ ಕಳೆದ ಜನವರಿ 21 ರಂದು ಉಜಿರೆ ಜಾತ್ರೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆಗೊಂಡಿತ್ತು. ಕಳೆದ ಜೂನ್ ತಿಂಗಳಿನಲ್ಲಿ ಮುಂಡಾಜೆ, ಚಾರ್ಮಾಡಿ ಪರಿಸರದಲ್ಲಿ ನೆರೆ ಪೀಡಿತರಿಗೆ ಸಂಕಷ್ಟದ ಸಂದರ್ಭ ಅಭಯಹಸ್ತ ನೀಡಿ ಸಹಕರಿಸಿತ್ತು. ಪ್ರಾಕೃತಿಕ ವಿಕೋಪಗಳು ಮುಂದೆ ಸಂಭವಿಸಿದಾಗ ನೆರವು ನೀಡಲು ಹಾಗೂ ಸೇವೆ ನೀಡಲು 600 ಜನರ ವ್ಯವಸ್ಥಿತ ಸ್ವಯಂ ಸೇವಕರ ತಂಡವನ್ನು ರಚಿಸಿದೆ.

ಈ ತಂಡ ಇನ್ನೂ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಲು ತಯಾರಿ ನಡೆಸಿದ್ದು, ಈಗಾಗಲೇ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *