ಬೆಂಗ್ಳೂರಲ್ಲಿ ಬೀದಿನಾಯಿಗಳಿಗೆ ಕಡಿವಾಣ ಹಾಕದ ಬಿಬಿಎಂಪಿ!

Public TV
2 Min Read

– ಸರಣಿ ದಾಳಿ ಆಗ್ತಿದ್ರೂ ಎಚ್ಚೆತ್ತುಕೊಳ್ತಿಲ್ಲ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಯಾವುದೇ ಕೆಲಸ ಮಾಡಬೇಕು ಅಂದರೂ ಅಲ್ಲಿ ಏನಾದರೂ ಅನಾಹುತಗಳಾಗಬೇಕು. ಅಲ್ಲಿಯವರೆಗೆ ಎಚ್ಚೆತ್ತುಕೊಳ್ಳುವುದಿಲ್ಲ. ಅದು ರೋಡ್, ಕಸ ಹಾಗೂ ನಾಯಿ ವಿಚಾರವಾದ್ರೂ ಅಷ್ಟೇ. ಇದೀಗ ಬೀದಿ ನಾಯಿಗಳ ನಿಯಂತ್ರಣ ಮಾಡುವಲ್ಲಿ ಬಿಬಿಎಂಪಿಯಿಂದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಹೌದು. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರುತ್ತಿವೆ. ಡಿಸೆಂಬರ್ ನಿಂದ ಒಂದಿಲ್ಲೊಂದು ಭಾಗದಲ್ಲಿ ಬೀದಿನಾಯಿಗಳ ದಾಳಿ ಪ್ರಕರಣಗಳು ಬರುತ್ತಲೇ ಇವೆ. ಇತ್ತೀಚೆಗಷ್ಟೇ ಎಲ್‍ಬಿಸಿ ನಗರದಲ್ಲಿ 9 ವರ್ಷದ ಬಾಲಕ ನಿರ್ಮಲ್ ಕುಮಾರ್ ಮೇಲೆ 8-10 ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದವು. ಮೂರು ತಿಂಗಳ ಹಿಂದೆ ನಾಯಿ ದಾಳಿಯಿಂದ ವಿಭೂತಿಪುರದ ಬಾಲಕ ಪ್ರವೀಣ್ ಮೃತಪಟ್ಟಿದ್ದ. ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ, ನಾಯಿಗಣತಿ ನಡೆಸ್ತೇವೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ ಅಂತಾರೆ. ಆದರೆ ಬಿಬಿಎಂಪಿ ವರದಿಯ ಪ್ರಕಾರವೇ ನಗರದಲ್ಲಿ 3 ಲಕ್ಷ ಬೀದಿನಾಯಿಗಳಿವೆಯಂತೆ. ಕಾಟಚಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ದೂರಿದ್ದಾರೆ.

ಬೀದಿ ನಾಯಿ ದಾಳಿಯಿಂದಾದ ಸಾವು-ನೋವುಗಳ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿದೆ. ಜೊತೆಗೆ ಇತ್ತೀಚೆಗೆ ಆದ ಬೀದಿನಾಯಿ ದಾಳಿಯ ಬಗ್ಗೆ ಬಿಬಿಎಂಪಿ ವಿರುದ್ಧವೂ ದೂರು ನೀಡಲು ನಾಗೇಶ ಮುಂದಾಗಿದ್ದಾರೆ.

ಡಿಸೆಂಬರ್‌ನಿಂದ ಮೇವರೆಗೂ ಬೀ ಕೇರ್‌ಫುಲ್‌:
ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಬ್ರಿಡಿಂಗ್ ಸಮಯವಂತೆ. ಈ ಸಮಯದಲ್ಲಿ ನಾಯಿಗಳು ಹಿಂಡುಹಿಂಡಾಗಿರುತ್ತವೆ. ಜೊತೆಗೆ ಅತಿ ಹೆಚ್ಚು ಸಿಟ್ಟಿನಲ್ಲಿರುತ್ತೆ. ಬಹಳ ಕ್ರೂರಿಯಾಗಿ ವರ್ತಿಸುತ್ತವೆ. ಇಂತಹ ಸಮಯದಲ್ಲಿ ಮನುಷ್ಯರ ಮೇಲೆ ದಾಳಿ ಮಾಡೋ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಬೇಸಿಗೆ ಸಮಯದಲ್ಲಿ ಬೀದಿ ನಾಯಿಗಳಿಗೆ ತಿನ್ನಲು ಊಟ ಹಾಗೂ ಕುಡಿಯಲು ನೀರು ಸಿಗೋದಿಲ್ಲ. ಈ ಕಾರಣಕ್ಕೆ ನಾಯಿಗಳಿಗೆ ವಿಪರೀತ ಕೋಪಗೊಂಡು ರಸ್ತೆಯಲ್ಲಿ ಓಡಾಡುವ ಮಕ್ಕಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತವೆ ಎಂದು ಪೆಟ್ ಡಾಕ್ಟರ್ ರೋಹಿತ್ ಹೇಳುತ್ತಾರೆ.

ಪೋಷಕರು ಕೂಡ ಮಕ್ಕಳ ಕೈಯಲ್ಲಿ ಬ್ರೆಡ್, ಬಿಸ್ಕೆಟ್ ಕೊಟ್ಟು ರೋಡಲ್ಲಿ ಬಿಟ್ಟು ಬಿಡ್ತಾರೆ. ಇದನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ. ದಯವಿಟ್ಟು ಪೋಷಕರು ಮಕ್ಕಳನ್ನು ರೋಡಲ್ಲಿ ಆಟವಾಡಲು ಬಿಡುವಾಗ ಎಚ್ಚರಿಕೆಯಿಂದ ಇರುವುದು ಒಳಿತು.

Share This Article
Leave a Comment

Leave a Reply

Your email address will not be published. Required fields are marked *