ನನ್ನ ಮೇಲಿನ ನಿಮ್ಮ ಪ್ರೀತಿ, ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲಿರಲಿ: ನಿಖಿಲ್

Public TV
3 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಅವರು, ತಾನು ಮದುವೆಯಾಗುತ್ತಿರುವ ಭಾವಿ ಪತ್ನಿಯ ಫೋಟೋವನ್ನು ಮೊದಲ ಬಾರಿಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮನೆಯ ಹಿರಿಯರು ನೋಡಿದ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿಯವರ ಜೋತೆ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಫಿಕ್ಸ್ ಆಗಿದ್ದು, ಫೆ 10 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಲು ಸಖಲ ಸಿದ್ಧತೆಗಳು ನಡೆಯುತ್ತಿವೆ. ಈ ವೇಳೆ ತಮ್ಮ ಭಾವಿ ಮಡದಿ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ನಿಖಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಿಖಿಲ್ ಮತ್ತು ರೇವತಿಯವರು ನಿಂತಿರುವ ಫೋಟೋವನ್ನು ಹಾಕಿ,”ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೋವನ್ನು ಶೇರ್ ಮಾಡಿಕೊಳ್ಳೋಕೆ ಖುಷಿ ಆಗುತ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ನಿಖಿಲ್ ವರಿಸುತ್ತಿರುವ ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ. ಜ.26 ರಂದು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ದೇವೇಗೌಡರ ಕುಟುಂಬದವರು ಭೇಟಿ ನೀಡಿ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿದ್ದರು. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರಾದ ಅನುಸೂಯ, ಶೈಲಜಾ ವಧುವಿನ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮುಗಿಸಿದ್ದರು.

https://www.facebook.com/iamNikhilGowda/photos/a.538978006208398/2480564392049740/

ನಂತರ ತನ್ನ ಭಾವಿ ಪತ್ನಿಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿಖಿಲ್, ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್. ನಮ್ಮ ಮನೆಯವರಿಗೆ ನೀವು ನೋಡಿದ ಹುಡುಗಿಯನ್ನೇ ಮದುವೆಯಾಗುತ್ತೀನಿ ಎಂದು ಹೇಳಿದ್ದೆ. ಈಗ ರೇವತಿ ಅವರನ್ನು ಮನೆಯವರು ನೋಡಿ ಆಯ್ಕೆ ಮಾಡಿದ್ದರು. ನನ್ನ ಅಭಿಪ್ರಾಯವನ್ನು ಕೇಳಿದರು. ನಾನು ಒಪ್ಪಿದ ಮೇಲೆ ಮದುವೆ ಫಿಕ್ಸ್ ಮಾಡಿದ್ದಾರೆ. ಹೀಗಾಗಿ ಕುಟುಂಬದವರ ಮಾತು ಉಳಿಸಿಕೊಂಡಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದರು.

ಇದೇ ವೇಳೆ, ರೇವತಿ ಸಂಪ್ರದಾಯಸ್ಥ ಮನೆಯವರ ಮಗಳು. ಅವರು ವಿದ್ಯಾವಂತೆ ಜೊತೆಗೆ ಒಳ್ಳೆಯ ಆಚಾರವಿದೆ. ಅವರ ಜೊತೆ ನಾನು ಮಾತನಾಡಿದ್ದೇನೆ. ನನ್ನ ಎರಡು ಸಿನಿಮಾಗಳನ್ನು ಅವರು ಥಿಯೇಟರ್ ನಲ್ಲಿ ನೋಡಿರುವುದಾಗಿ ತಿಳಿಸಿದ್ದರು. ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್ ಎಂದು ರೇವತಿ ಬಗ್ಗೆ ತಿಳಿಸಿದದ್ದರು.

ಇದೇ ತಿಂಗಳು ಫೆಬ್ರವರಿ 10 ರಂದು ನಿಖಿಲ್ ಮತ್ತೆ ರೇವತಿ ನಿಶ್ಚಿತಾರ್ಥ ನಡೆಯಲಿದೆ. ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಅದ್ಧೂರಿಯಾಗಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ. ಈ ಜೋಡಿಯ ಎಂಗೇಜ್‍ಮೆಂಟ್‍ನಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬದವರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಸುಮಾರು 5 ಸಾವಿರ ಜನರು ನಿಶ್ಚಿತಾರ್ಥದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಮಗನ ಮದುವೆ ಬಗ್ಗೆ ರಾಮನಗರದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಎಲ್ಲ ನಾಯಕರು ಮದುವೆಯನ್ನು ಬೆಂಗಳೂರಿನಲ್ಲಿ ಮಾಡುತ್ತಾರೆ. ನಿಖಿಲ್‍ನ ನಿಶ್ಚಿತಾರ್ಥವನ್ನು ಬೆಂಗಳೂರಿನಲ್ಲಿ ಹಾಗೂ ಮದುವೆ ರಾಮನಗರದಲ್ಲಿ ನಡೆಸುವುದಾಗಿ ತಿಳಿಸಿದ್ದರು. ಜೊತೆಗೆ ಮದುವೆಗೆ ರಾಮನಗರ, ಮಂಡ್ಯ ಜಿಲ್ಲೆಯ ಪ್ರತೀ ಮನೆಯವರಿಗೂ ಆಹ್ವಾನ ನೀಡಲಾಗುವುದು ಎಂದು ಹೇಳಿದ್ದರು.

ನನಗೆ ರಾಜಕೀಯವಾಗಿ ಜನ್ಮ ನೀಡಿದ ಎರಡು ಕ್ಷೇತ್ರಗಳ ರಾಮನಗರ, ಚನ್ನಪಟ್ಟಣ ಅಲ್ಲದೇ ಮಂಡ್ಯ, ಮಳವಳ್ಳಿ, ಕನಕಪುರ, ಮಾಗಡಿ ಜನರ ಋಣ ನನ್ನ ಮೇಲಿದೆ. ಆ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲೆ ಇದೆ. ಸಮಾರಂಭ ಎಂದು ಮಾಡುವ ಅವಕಾಶವಿರುವುದು ಇದೊಂದೇ ಆಗಿದ್ದು, ಪ್ರತೀ ಮನೆಗೂ ಆಹ್ವಾನ ಪತ್ರಿಕೆ ನೀಡುವ ವ್ಯವಸ್ಥೆ ಮಾಡುತ್ತಿದ್ದಾನೆ. ಎರಡೂ ಜಿಲ್ಲೆಯ ಎಲ್ಲರಿಗೂ ಮದುವೆಗೆ ಆಹ್ವಾನವನ್ನು ನೀಡಲಾಗುವುದು ಎಂದು ತಿಳಿಸಿದ್ದರು.

ರಾಮನಗರ, ಮಂಡ್ಯ ಜಿಲ್ಲೆಗಳ ಜನರಿಗೆ ಊಟ ಹಾಕಬೇಕೆಂಬ ಆಸೆ ಇತ್ತು. ಮಗನ ಮದುವೆ ಮೂಲಕ ಜನರಿಗೆ ಊಟ ಹಾಕಲಾಗುವುದು. ಜನರ ಜೊತೆಗೆ ಮಗನ ಮದುವೆಯ ಸಂಭ್ರಮ ಸಹ ಮಾಡುವುದಾಗಿ ಹೇಳಿದ್ದರು. ಚನ್ನಪಟ್ಟಣದ ಹತ್ತಿರ ನಿಖಿಲ್ ಮದುವೆಯನ್ನು 54 ಎಕರೆ ಜಾಗದಲ್ಲಿ ಸೆಟ್ ಹಾಕಿಸಿ ಮಾಡಲು ಎಚ್‍ಡಿಕೆ ಕುಟುಂಬ ನಿರ್ಧಾರ ಮಾಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಈಗ ತಿಳಿದುಬಂದಿದೆ. ಆದರೆ ಇನ್ನು ಈ ವಿಚಾರದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *