ಬಂಡಾಯದ ಆಸೆ ಬಣ ಮಾಡುವಷ್ಟರಲ್ಲೇ ನಿರಾಸೆ!

Public TV
4 Min Read

ಸುಕೇಶ್ ಡಿಎಚ್
ಲ್ಲಿ ಬಂಡಾಯದ ಬಾವುಟ ಹಾರಿಸಿ ಸೈ ಎನ್ನಿಸಿಕೊಂಡವರಿಗೆ ಇಲ್ಲೂ ನಮ್ಮದೆ ಆಟ ಎಂದುಕೊಂಡು ಎಡವಿದ್ದಾರೆ ನೂತನ ಶಾಸಕರುಗಳು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಂಡಾಯದ ಬಾವುಟವನ್ನೆ ಹಾರಿಸುತ್ತಾ ಕುಳಿತಿದ್ದ ಸಾಹುಕಾರ ರಮೇಶ್ ಜಾರಕಿಹೊಳಿಗೆ ಬಂಡಾಯದ ಬಾವುಟ ಹಾರಿಸುವುದೇ ಖಾಯಂ ಅಭ್ಯಾಸವಾದಂತಿದೆ. ಆದರೆ ಕಂಡ ಕಂಡಲ್ಲಿ ಬಂಡಾಯದ ಬಾವುಟ ಹಾರಿಸೋಕೆ ಇದು ಕಾಂಗ್ರೆಸ್ ಅಲ್ಲ ಬಿಜೆಪಿ ಅನ್ನೋ ಸತ್ಯ ಅಷ್ಟೇ ಬೇಗ ಅರ್ಥವಾದಂತಿದೆ. ಅಲ್ಲಿಗೆ ಸಚಿವ ಸ್ಥಾನಕ್ಕಾಗಿ ಬಂಡಾಯದ ಸಣ್ಣ ಬಾವುಟ ಎತ್ತಿಕಟ್ಟಲು ಮುಂದಾದ ಜಾರಕಿಹೊಳಿಗೆ ಬಂಡಾಯವಿರಲಿ ಕೊನೆ ಪಕ್ಷ ಚಿಕ್ಕದೊಂದು ಬಣ ಸೃಷ್ಟಿಸೋದು ಕಷ್ಟ ಬಿಜೆಪಿಯಲ್ಲಿ ಅನ್ನೋದು ಸ್ಪಷ್ಟವಾಗಿದೆ. ಆದ್ದರಿಂದ ಸಮಾನ ಮನಸ್ಕ 4-5 ಶಾಸಕರನ್ನ ಕಟ್ಟಿಕೊಂಡು ದೇವಸ್ಥಾನ ಸುತ್ತುವುದರಲ್ಲಿ ಸುಸ್ತಾಗಿ ಕುಳಿತಿದ್ದಾರೆ. ಬೇಕೆಂದಾಗ ಬೇಕಾದ ಸಚಿವ ಸ್ಥಾನ ಸಿಕ್ಕಿ ಬಿಡುತ್ತೆ ಇಡೀ ಬಿಜೆಪಿ ಸರ್ಕಾರವೇ ನಮ್ಮ ಕೈಯಲ್ಲಿದೆ ಅನ್ನೋ ಭ್ರಮೆಯೂ ಕಳಚಿದಂತಿದೆ.

ಹಾಗೇ ನೋಡೋದಾದರೆ ಎಲ್ಲಾ ಅನರ್ಹ ಶಾಸಕರು ಗೆದ್ದ 24 ಗಂಟೆಯಲ್ಲಿ ಸಚಿವರಾಗ್ತಾರೆ ಅಂತ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಚುನಾವಣಾ ಪ್ರಚಾರದಲ್ಲಿ ಘೋಷಿಸಿದ್ದರು. ಗೆದ್ದ ಹುಮ್ಮಸ್ಸಿನಲ್ಲಿ ಎಲ್ಲರ ಶಾಸಕರು 24 ಗಂಟೆಯಲ್ಲಿ ಸಚಿವರಾಗುವ ಕನಸು ನೂತನ ಶಾಸಕರದ್ದಾಗಿತ್ತು. ಆದರೆ ಗೆಲುವಿನ ಸಂಭ್ರಮಾಚರಣೆ ಮುಗಿಯುವುದರೊಳಗೆ ನೂತನ ಶಾಸಕರಿಗೆ ಒಂದಂತು ಖಚಿತವಾಗಿತ್ತು. 24 ಗಂಟೆಯೊಳಗಿನ ಸಚಿವ ಸ್ಥಾನದ ಕನಸು ನನಸಾಗಲ್ಲ ಅನ್ನೋದು.

ಹಾಗೆ ನೋಡಿದರೆ ಸಿಎಂ ಯಡಿಯೂರಪ್ಪ ತಮ್ಮ ಸರ್ಕಾರವನ್ನ ಸೇಫ್ ಝೋನ್ ಗೆ ತಂದವರನ್ನ ಕೂಡಲೇ ಸಚಿವರನ್ನಾಗಿ ಮಾಡಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅಷ್ಟು ಸುಲಭಕ್ಕೆ ಹೊಸಬರ ತಾಳಕ್ಕೆ ಕುಣಿವಷ್ಟು ದುರ್ಬಲವಾಗಿಲ್ಲ ಅನ್ನೋದು ನೂತನ ಶಾಸಕರಿಗೆ ಅರ್ಥವಾಗುವಷ್ಟರಲ್ಲಿ ತಿಂಗಳು ಕಳೆದಿದೆ. ಇದನ್ನ ಬಹುಬೇಗ ಅರ್ಥ ಮಾಡಿಕೊಂಡು ಸೈಲೆಂಟಾದವರು ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್, ಭೈರತಿ ಬಸವರಾಜು, ಗೋಪಾಲಯ್ಯ ಹಾಗೂ ನಾರಾಯಣಗೌಡ. ಮೌನವಾಗಿದ್ದಷ್ಟು ಅನುಕೂಲಕರ ಅನ್ನೋದು ಅವರಿಗೆ ಅರ್ಥವಾಗಿದ್ದು. ಉಳಿದ ಅನರ್ಹರು ಹಾಗೂ ಅರ್ಹರು ಇಬ್ಬರಿಗು ಅರ್ಥವಾಗಲಿಲ್ಲ ತಾವು ಹೇಗಿರಬೇಕು ಅನ್ನೋದು. ಆದ್ದರಿಂದ ಕೀರಲು ಧ್ವನಿಯಲ್ಲಾದರು ಬೊಬ್ಬೆ ಹೊಡೆದು ಸದ್ದು ಮಾಡಲು ಮುಂದಾಗಿ ಧ್ವನಿ ಹೊರ ಬರದೆ ಗಂಟಲು ಕಟ್ಟಿದಂತಾಗಿ ಉಸಿರು ಎಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಬಂಡಾಯದ ನಾಯಕತ್ವದ ನೇತೃತ್ವ ವಹಿಸಿಕೊಂಡು ಇಲ್ಲೂ ಆಟ ಕಟ್ಟಿದರೆ ಸಚಿವ ಸ್ಥಾನ ಬಹುಬೇಗ ಸಿಕ್ಕಿಬಿಡುತ್ತೆ ಭ್ರಮೆಗೆ ರಮೇಶ್ ಜಾರಕಿಹೋಳಿ ಅಂಡ್ ಟೀಂ ಸಚಿವ ಸ್ಥಾನ ಕೊಡದಿರವುದಕ್ಕೆ ನಮಗು ಅಸಮಧಾನವಿದೆ ಅನ್ನೋದನ್ನ ಬಿಂಬಿಸುವ ಪ್ರಯತ್ನಕ್ಕೆ ಮುಂದಾಯ್ತು. ರಮೇಶ್ ಜಾರಕಿಹೊಳಿ ಅವರನ್ನು ಸದಾ ನೆರಳಿನಂತೆ ಹಿಂಬಾಲಿಸುವ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಬಿಟ್ಟರೆ ಮೂರನೆಯವರನ್ನ ಒಟ್ಟುಗೂಡಿಸಲು ರಮೇಶ್ ಜಾರಕಿಹೊಳಿ ಕೈಯಲ್ಲಿ ಆಗಲಿಲ್ಲ. ಅಂತು ಇಂತು ಜೊತೆ ಸೇರಿದ ಮಾಜಿ ಸಚಿವ ಆರ್.ಶಂಕರ್ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರಲಷ್ಟೇ ಸೀಮಿತವಾದರು. ಆದರೆ ಹಿಂದೆ ಕಾಂಗ್ರೆಸ್ ನಲ್ಲಿ ಇದ್ದಾಗ ಸೇರುತ್ತಿದ್ದ ಹಾಗೆ ಒಂದೇ ಒಂದು ಬಂಡಾಯದ ಸಭೆ ನಡೆಸಲು ಸಾಧ್ಯವಾಗಲೇ ಇಲ್ಲ.

ಇನ್ನೊಂದು ಕಡೆ ಸೋತ ವಿಶ್ವನಾಥ್ ಹಾಗೂ ಎಂ.ಟಿ.ಬಿ.ನಾಗರಾಜ್ ತಮ್ಮದೆ ನೆಲೆಯಲ್ಲಿ ಸಚಿವ ಸ್ಥಾಕ್ಕಾಗಿ ಲಾಬಿ ಆರಂಭಿಸಿದರು. ಆದರೆ ಯಾವುದೇ ಬಣದ ಚಟುವಟಿಕೆ ನಡೆಸದೇ ಅಂತರ ಕಾಯ್ದುಕೊಂಡರು. ಅಲ್ಲಿಗೆ ಸಾಹುಕಾರನಿಗೆ ಒಂದಂತು ಸ್ಪಷ್ಟವಾಗಿತ್ತು ಅಂದುಕೊಂಡಂತೆ ಶಾಸಕರನ್ನ ಒಟ್ಟುಗೂಡಿಸಿಕೊಂಡು ಹೆದರಿಸಲು ಇದು ಕಾಂಗ್ರೆಸ್ ಅಲ್ಲಾ ಇದು ಬಿಜೆಪಿ ಅನ್ನೋದು. ಗೆದ್ದವರಲ್ಲೆ ಸೈಲೆಂಟಾಗಿ ಕಾದು ನೋಡುವವರ ಬಣ ಒಂದಾದರೆ ಏನಾದರೂ ಮಾಡಿ ಸಚಿವ ಸ್ಥಾನ ಪಡೆಯಬೇಕು ಅದಕ್ಕಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು ಎಂದು ಸರ್ಕಸ್ ನಡೆಸ ಹೊರಟವರದು ಇನ್ನೊಂದು ಬಣವಾಯ್ತು.

ಚುನಾವಣೆಗೆ ನಿಲ್ಲದ ಶಂಕರ್ ಈ ಹಿಂದೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದಾಗ ಮಾಡಿಕೊಂಡ ಎಡವಟ್ಟಿನಂತೆ ಈಗಲು ಎಡವಟ್ಟಿನ ಹೆಜ್ಜೆ ಇಡತೊಡಗಿದ್ದಾರೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ನನಗೆ ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ ನನ್ನನ್ನ ಸಚಿವರನ್ನಾಗಿ ಮಾಡುತ್ತಾರೆ ಆ ನಂಬಿಕೆ ನನಗಿದೆ ಎನ್ನುತ್ತಾ, ಮತ್ತೊಂದು ಕಡೆ ಕದ್ದುಮುಚ್ಚಿ ರಮೇಶ್ ಜಾರಕಿಹೊಳಿ ಭೇಟಿಯಾಗುತ್ತ ಹೀಗಿದ್ದರೆ ಹೇಗೆ, ಬಂಡಾಯದ ಬಾವುಟ ಹಾರಿಸಿದರೆ ಹೇಗೆ ಅಂತ ಗಳಿಗೆಗೊಂದು ಅವತಾರ ತಾಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಸೋತ ವಿಶ್ವನಾಥ್ ಹಾಗೂ ಎಂಟಿಬಿ ಮಾತ್ರ ನಮ್ಮದೆ ಪ್ರತ್ಯೇಕ ಅಸ್ತಿತ್ವ ಎನ್ನುವಂತೆ ನಡೆದುಕೊಂಡು ತಮ್ನ ಸೀನಿಯಾರಿಟಿ ಮೇಲೆ ಸಚಿವ ಸ್ಥಾನ ಪಡೆಯುವ ಪ್ರತ್ಯೇಕ ಕಸರತ್ತು ಮುಂದುವರಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪರಿಗೆ ತಮಗಾಗಿ ರಿಸ್ಕ್ ತಗೆದುಕೊಂಡು ರಾಜೀನಾಮೆ ಕೊಟ್ಟು ಗೆದ್ದು ಬಂದ ಎಲ್ಲಾ 11 ಜನರನ್ನು ಮಂತ್ರಿ ಮಾಡಬೇಕು ಅನ್ನೋ ಆಸೆ ಇದ್ದಂತಿದೆ. ಆದರೆ ಬಿಜೆಪಿ ಹೈಕಮಾಂಡ್ ಅಷ್ಟು ಸುಲಭಕ್ಕೆ ಹೊಸಬರಿಗೆ ಮಣೆ ಹಾಕೋದು ಅನುಮಾನ. ಹೊಸಬರಲ್ಲಿ 11ರಲ್ಲಿ 10 ಜನರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಲು ನಿರ್ಧರಿಸಿದೆ. ಆದರೆ ಒಂದಂತೂ ಸ್ಪಷ್ಟ ಯಾವ ಜೋಷ್ ನಲ್ಲಿ ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಪಾಳಯಕ್ಕೆ ಎಂಟ್ರಿ ಕೊಟ್ಟರೋ ಆ ಜೋಷ್ ಈಗ ಜಾರಕಿಹೊಳಿ ಅಂಡ್ ಟೀಂ ನಲ್ಲಿ ಇಲ್ಲ. ಕಾಂಗ್ರೆಸ್ ನಲ್ಲಿ ಹಾರಿಸಿದಂತೆ ಬಂಡಾಯದ ಬಾವುಟ ಹಾರಿಸಿ ಸವಾಲು ಎಸೆಯುವ ಆಸೆ ಇದ್ದರೂ ಜೊತೆಗಿದ್ದ ಶಾಸಕರೇ ಝಂಡಾ ಹಿಡಿಯಲು ಸಿದ್ಧರಿಲ್ಲ. ಆದರೂ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದವರಿಗೆ ಈಗ ಅದೆಲ್ಲಾ ಮುಗಿದು ಹೋದ ಕಥೆ ಅನ್ನೋದು ಮನವರಿಕೆ ಆದಂತಿದೆ. ಬಂಡಾಯ ಎದ್ದವರಂತೆ ನಟಿಸುವ ಆಸೆ ಇದ್ದರು ಬಂಡಾಯವಿರಲಿ ಬಣ ತೋರಿಸೋಕು ಜೊತೆಗೆ ಶಾಸಕರಿಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅಂಗಳದಲ್ಲಿ ಆಡಿದ ಆಟವನ್ನ ಬಿಜೆಪಿ ಅಂಗಳದಲ್ಲಿ ಆಡಲು ಹೋದರೆ ಅಸ್ತಿತ್ವವೇ ಅಲ್ಲಾಡುವ ಭೀತಿಯಲ್ಲಿ ಮಾಜಿ ಬಂಡಾಯಗಾರರು ಒಳಗೊಳಗೆ ಉಗುಳು ನುಂಗಿಕೊಳ್ಳುವಂತಾಗಿರುವುದಂತೂ ಸತ್ಯ.

Share This Article
Leave a Comment

Leave a Reply

Your email address will not be published. Required fields are marked *