ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ

Public TV
1 Min Read

ವೆಲ್ಲಿಂಗ್ಟನ್: ಸೂಪರ್ ಓವರ್‌ನಲ್ಲಿ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಕಾಲಿನ್ ಮನ್ರೊ ಅವರನ್ನು ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಲ್ಲಿಂಗ್ಟನ್ ವೆಸ್ಟ್‍ಪ್ಯಾಕ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಶುಕ್ರವಾರ ನಡೆದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್‍ನ ಆರಂಭಿಕ ಬ್ಯಾಟ್ಸ್‌ಮನ್‌ ಕಾಲಿನ್ ಮನ್ರೊ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಗಪ್ಟಿಲ್ ವಿಕೆಟ್ ಬಳಿಕ ಮೈದಾನಕ್ಕಿಳಿದ ಟೀಂ ಸೀಫರ್ಟ್ ಜೊತೆ ಸೇರಿ ಮನ್ರೊ ಎರಡನೇ ವಿಕೆಟ್‍ಗೆ 74 ರನ್ ಜೊತೆಯಾಟ ನೀಡಿದರು. ಇದನ್ನೂ ಓದಿ: ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

ಸೀಫರ್ಟ್ ಹಾಗೂ ಮನ್ರೊ ಜೋಡಿಯನ್ನು ಇನ್ನಿಂಗ್ಸ್ ನ 12ನೇ ಓವರಿನ 4ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಮತ್ತು ವಿರಾಟ್ ಕೊಹ್ಲಿ ಜಂಟಿಯಾಗಿ ಮುರಿದರು. ಸ್ಟ್ರೈಕ್‍ನಲ್ಲಿದ್ದ ಮನ್ರೊ ಭಾರತದ ಯುವ ವೇಗಿ ಶಿವಂ ದುಬೆ ಎಸೆದ ಬಾಲ್ ಅನ್ನು ಬೌಂಡರಿ ಕಡೆಗೆ ತಳ್ಳಿ ಎರಡು ರನ್ ಕದಿಯಲು ಮುಂದಾದರು. ಬೌಂಡರಿ ಲೈನ್ ಬಳಿ ಫಿಲ್ಡೀಂಗ್ ಮಾಡುತ್ತಿದ್ದ ಶಾರ್ದೂಲ್ ಠಾಕೂರ್ ವೇಗವಾಗಿ ಬಂದು ಬಾಲನ್ನು 30 ಯಾರ್ಡ್ ಸರ್ಕಲ್ ಒಳಗಡೆ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಕಡೆಗೆ ಎಸೆದರು. ಆಗ ಕೊಹ್ಲಿ ಸ್ಟ್ರೈಕರ್ ವಿಕೆಟ್‍ಗೆ ನೇರವಾಗಿ ಬಾಲ್ ಎಸೆದು ಮನ್ರೊ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದರು. ಇದನ್ನೂ ಓದಿ: ನ್ಯೂಜಿಲೆಂಡ್ ತಂಡವನ್ನು ಹಾಡಿ ಹೊಗಳಿದ ಹಿಟ್‍ಮ್ಯಾನ್

ಕಾಲಿನ್ ಮನ್ರೋ 64 ರನ್ (47 ಎಸೆತ, 6 ಬೌಂಡರಿ, 3 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನತ್ತ ಸಾಗಿಸುತ್ತಿದ್ದರು. ಶಾರ್ದೂಲ್ ಹಾಗೂ ಕೊಹ್ಲಿ ಕ್ಷಣಾರ್ಧದಲ್ಲೇ ನಿರ್ಧಾರ ತೆಗೆದುಕೊಂಡು ವಿಕೆಟ್ ಕಿತ್ತಿದ್ದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೊಹ್ಲಿ ಹಾಗೂ ಶಾರ್ದೂಲ್ ಫಿಲ್ಡೀಂಗ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://twitter.com/Kailash1131/status/1223261985132793862

Share This Article
Leave a Comment

Leave a Reply

Your email address will not be published. Required fields are marked *