ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

Public TV
4 Min Read

ದೇಶಾದ್ಯಂತ ಜೆಎನ್‍ಯು ಬಳಿಕ ಈಗ ಭಾರೀ ಚರ್ಚೆಯಲ್ಲಿರೋದು ಶಹೀನ್ ಬಾಗ್. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಜೆಎನ್‍ಯು ಅಂದ್ರೆ ಜವಹಾರಲಾಲ್ ನೆಹರು ವಿಶ್ವವಿದ್ಯಾಲಯ ಎಷ್ಟು ಸುದ್ದಿಯಾಗಿತ್ತೋ? ಅದರಷ್ಟೇ ಮಟ್ಟಿಗೆ ಈಗ ಸುದ್ದಿಯಾಗ್ತಿರೋದು ಶಹೀನ್ ಬಾಗ್. ಕಳೆದ ಎರಡು ತಿಂಗಳಿಂದ ಶಹೀನ್ ಬಾಗ್‍ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೀತಿವೆ. ಈ ಮೂಲಕ ಸಿಎಎ, ಎನ್​ಆರ್​ಸಿ ವಿರೋಧಿ ಹೋರಾಟದ ವೇದಿಕೆಯಾಗಿ ಮಾರ್ಪಟ್ಟಿದೆ. ಮಹಿಳೆಯರು ಸೇರಿದಂತೆ ಸಾವಿರಾರು ಜನ ಹೋರಾಟ ಮಾಡ್ತಿದ್ದಾರೆ.

ಶಹೀನ್‍ಬಾಗ್ ಹೋರಾಟಗಾರರು ರೇಪಿಸ್ಟ್‌ಗಳು
ಫೆಬ್ರವರಿ 8ರ ದೆಹಲಿ ವಿಧಾನಸಭೆ ಎಲೆಕ್ಷನ್‍ಗೆ ದಿನಗಣನೆ ಇರುವಾಗಲೇ ಶಹೀನ್ ಬಾಗ್ ಈಗ ರಾಜಕೀಯ ವಸ್ತುವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಈ ಶಹೀನ್ ಬಾಗ್ ಅನ್ನು ದೇಶದ್ರೋಹಿ, ಪ್ರಚೋದನಕಾರಿ ಹೇಳಿಕೆಗೆ ಅಡ್ಡೆ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಶಹೀನ್ ಬಾಗ್‍ನ ಪ್ರತಿಭಟನಾಕಾರರನ್ನು ಅತ್ಯಾಚಾರಿಗಳು, ಕೊಲೆಗಡುಕರು. ಈ ಪ್ರತಿಭಟನಾಕಾರರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಅಂತ ಪಶ್ಚಿಮ ದೆಹಲಿಯ ಬಿಜೆಪಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಿಮಗೆ ಯೋಚನೆ ಮಾಡಲು ಸಕಾಲ. ಈಗಲೇ ಎಚ್ಚರಗೊಳ್ಳಬೇಕಿದೆ. ನೀವು ಎಚ್ಚರಗೊಂಡರೆ ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ನೆರವಿಗೆ ಬರ್ತಾರೆ. ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ನೆರವಿಗೆ ಬರಲ್ಲ ಅಂತ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಶಬೀನ್ ಬಾಗ್ ಧ್ವಂಸ ಮಾಡ್ತೇವೆ ಅಂದಿದ್ದಾರೆ.

ಆಪ್-ಬಿಜೆಪಿ ಕೋಮು ಸಂಘರ್ಷ
ದೆಹಲಿಯ ಎಲೆಕ್ಷನ್‍ನ ರಾಜಕೀಯ ವಿಷಯವಾಗಿರೋ ಶಹೀನ್ ಬಾಗ್‍ಗೆ ಹೋರಾಟಗಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಇದಕ್ಕೆ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ತಿರುಗೇಟು ಕೊಟ್ಟಿದ್ದರು. ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತು ಈ ರೀತ್ಯಾಗಿ ಆಧಾರ ರಹಿತ ಆರೋಪಗಳನ್ನು ಮಾಡ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಚುನಾವಣೆಯ ಪ್ರಚಾರಕ್ಕೆ ಸರಕು ಇಲ್ಲ. ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ ಅನ್ನೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹಾಗಾಗಿ, ಪ್ರತಿ ಚುನಾವಣೆಯ ಅಸ್ತ್ರ ಎಂಬಂತೆ ಪ್ರಚಾರದಲ್ಲಿ ಕೋಮುವಾದವನ್ನು ತುಂಬಲು ಆರಂಭಿಸಿದೆ. ಸಿಎಎ ವಿರೋಧಿಸುತ್ತಿರುವವರೆಲ್ಲಾ ಮುಸಲ್ಮಾನರು ಎಂಬ ಭಾವನೆ ಬರುವ ರೀತಿಯಲ್ಲಿ ಬಿಂಬಿಸಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಅಂತ ವಾಗ್ದಾಳಿ ನಡೆಸಿದೆ.

ಗೋಲಿ ಮಾರೋ.. ಗೋಲಿ ಮಾರೋ
ಸಂಸದ ಪರ್ವೇಶ್ ವರ್ಮಾ ರೀತಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಮಂತ್ರಿ ಅಮಿತ್ ಶಾ ಪಾಲ್ಗೊಂಡಿದ್ದ ಚುನಾವಣಾ ಸಮಾವೇಶದಲ್ಲಿ `ದೇಶ್ ದ್ರೋಹಿಯೋಂಕೋ ಗೋಲಿ ಮಾರ್.. ಗೋಲಿಮಾರ್’ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು) ಅಂತ ಘೋಷಣೆ ಕೂಗಿದ್ದಾರೆ. ಕೇಂದ್ರ ಸಚಿವರು ಅನ್ನೋ ತಮ್ಮ ಸ್ಥಾನದ ಮಹತ್ವ-ಜವಾಬ್ದಾರಿಯನ್ನು ಅರಿತು ಅನುರಾಗ್ ಘೋಷಣೆ ಕೂಗಿದ್ದು ಎಷ್ಟು ಸರಿ ಅಂತ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ, ಅನುರಾಗ್ ಠಾಕೂರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ನೊಟೀಸ್ ಕೊಟ್ಟಿದ್ದು, ಜನವರಿ 30ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.

ಶಹೀನ್ ಬಾಗ್ ಅಂತಾರಾಷ್ಟ್ರೀಯ ಸುದ್ದಿ
ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಪಿಸ್ತೂಲ್ ಸಮೇತ ನುಗ್ಗಿ, ಪ್ರತಿಭಟನಾಕಾರರು ಈ ಕ್ಷಣವೇ ಜಾಗ ಖಾಲಿ ಮಾಡ್ಬೇಕು ಅಂತಲೂ ಬೆದರಿಸಿದ್ದ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಸಿಎಎ ವಿರೋಧಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಶಹೀನ್ ಬಾಗ್ ಪ್ರದೇಶ ಕೇವಲ ಹೆಸರಾಗಿ ಉಳಿದಿಲ್ಲ. ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್, ಈಜಿಪ್ಟ್ ತಹ್ರೀರ್ ಸ್ಕ್ವೇರ್, ಟರ್ಕಿಯ ತಕ್ಸಿಂ ಸ್ಕ್ವೇರ್ ನಷ್ಟೇ ಪ್ರಸಿದ್ಧವಾಗಿದೆ. ಅಲ್ಲದೆ, ಕೋಲ್ಕತ್ತಾದ ಪಾರ್ಕ್ ಸರ್ಕಸ್, ಲಖನೌದ ಘಂಟಾ ಘರ್, ಬೆಂಗಳೂರಿನ ಮಸೀದ್ ರೋಡ್‍ಗಳು ಕೂಡ ಶಹೀನ್ ಬಾಗ್‍ಗಳಾಗಿ ಮಾರ್ಪಟ್ಟಿವೆ ಅಂತ ಜೆಎನ್‍ಯು ವಿದ್ಯಾರ್ಥಿ ಹೋರಾಟಗಾರ ಖಾಲಿದ್ ಉಮರ್ ಹೇಳಿದ್ದಾರೆ.

ಎಲ್ಲಿದೆ ಶಹೀನ್ ಬಾಗ್?
ದಕ್ಷಿಣ ದೆಹಲಿಯ ಓಕ್ಲಾ ಪ್ರದೇಶದಲ್ಲಿದೆ ಶಹೀನ್ ಬಾಗ್. ಯಮುನಾ ನದಿಯ ದಡದಲ್ಲಿದೆ. ಪೌರತ್ವ ವಿರೋಧಿ ಹೋರಾಟದ ಸದ್ಯದ ಕೇಂದ್ರ ಸ್ಥಾನ.

ಶಹೀನ್ ಬಾಗ್‍ಗೂ ಪಿಎಫ್‍ಐ ನಂಟು:
ದೇಶಾದ್ಯಂತ ಪೌರತ್ವ ವಿರೋಧಿ ಹೋರಾಟದ ವೇಳೆ ಹಿಂಸಾಚಾರ ಸೃಷ್ಟಿಗೆ ಕೇರಳ ಮೂಲದ ಪಿಎಫ್‍ಐಗೆ 120 ಕೋಟಿ ಫಂಡ್ ಬಂದಿರೋ ಸಂಬಂಧ ಪಿಎಫ್‍ಐ ಮತ್ತದರ ಜೊತೆ ನಂಟು ಹೊಂದಿರೋ ಎನ್‍ಜಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ. ಈ ಹೊತ್ತಲ್ಲೇ, ಪಿಎಫ್‍ಐನ ಪ್ರಮುಖ ಅಧಿಕಾರಿಗಳು ಶಹೀನ್ ಬಾಗ್ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಿದೆ.

ಪ್ರಚೋದನಕಾರಿ ಭಾಷಣದ ಮಾಸ್ಟರ್ ಮೈಂಡ್
ಜೆಎನ್‍ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ಶಹೀನ್ ಬಾಗ್ ಹೋರಾಟದ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬಂದಿದೆ. ಈತನ ಪ್ರಚೋದನಕಾರಿ ಹೇಳಿಕೆಯಿಂದಲೇ ಶಹೀನ್ ಬಾಗ್‍ನಲ್ಲಿ ಹೋರಾಟ ಭಾವೋದ್ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಸಿಎಎ ವಿರೋಧಿಸಿ ಕಿಚ್ಚೆಬ್ಬಿಸೋ ನೆಪದಲ್ಲಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿರೋ ಶರ್ಜಿಲ್ ಇಮಾಮ್ ವೀಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಹೀಗಾಗಿ, ಶರ್ಜಿಲ್ ಇಮಾಮ್ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿತ್ತು. ಈಗ ಅರೆಸ್ಟ್ ಮಾಡಲಾಗಿದೆ. ಆದರೆ, ರಾಷ್ಟ್ರ ಬಿಜೆಪಿಯ ಜೋಡೆತ್ತುಗಳಂತಿರೋ ಮೋದಿ-ಅಮಿತ್ ಶಾ ಏನು ಬೇಕಾದರೂ ಹೇಳಬಹುದು. ಆ ಹೇಳಿಕೆಗಳಿಂದ ಸಮಾಜದಲ್ಲಿ ಎಂಥಹ ಅನಾಹುತಗಳು ನಡೆಯಬಹುದು. ಆದರೆ, ಇವರನ್ನು ಟೀಕಿಸಿದರೆ, ಇವರ ವಿರುದ್ಧ ದನಿ ಎತ್ತಿದರೆ ಸುಳ್ಳು ಕೇಸ್‍ಗಳನ್ನು ಹಾಕಿ ಆ ದನಿಯನ್ನು ಅಡಗಿಸೋ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅಂತ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
– ಆನಂದ ಪಿಎನ್

Share This Article
Leave a Comment

Leave a Reply

Your email address will not be published. Required fields are marked *