ರಾತ್ರಿ ಆದ್ರೆ ಸಾಕು ಮನೆಗಳ ಮೇಲೆ ಬೀಳುತ್ತೆ ಕಲ್ಲು

Public TV
2 Min Read

– ಪೊಲೀಸರು ಬಂದ್ರೂ ಸಿಗ್ಲಿಲ್ಲ ಸಮಸ್ಯೆಗೆ ಮುಕ್ತಿ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಮನೆ ಮೇಲೆ ಕಲ್ಲುಗಳು ಬೀಳುತ್ತಿದ್ದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಕಲ್ಲುಗಳು ಎಲ್ಲಿಂದ ಬೀಳುತ್ತಿವೆ ಅನ್ನೋದೇ ಅರ್ಥವಾಗದಂತಾಗಿದ್ದು, ಕಲ್ಲುಗಳು ಬಿದ್ದ ಮೇಲೆ ಹೆಂಚುಗಳು ಒಡೆದ ಶಬ್ದದಿಂದ ಗೊತ್ತಾಗುತ್ತಿದೆ. ಆದರೆ ಎಲ್ಲಿಂದ ಕಲ್ಲುಗಳು ಬೀಳುತ್ತಿವೆ ಎಂದು ಸ್ಥಳೀಯರಿಗೆ ಗೊತ್ತಾಗುತ್ತಿಲ್ಲ.

ಗುರುವಾರ ಸಂಜೆ ಸುಮಾರು 6 ಗಂಟೆಗೆ ಮನೆ ಮೇಲೆ ಪಟ-ಪಟನೇ ಕಲ್ಲುಗಳು ಬಿದ್ದಿವೆ. ಮನೆಯವರು ಮಕ್ಕಳು ಎಸೆಯುತ್ತಿರಬೇಕೆಂದು ಹೊರಬಂದು ನೋಡಿದ್ದಾರೆ. ಆದರೆ ಯಾರೂ ಇರಲಿಲ್ಲ. ಕಲ್ಲುಗಳು ಮಾತ್ರ ಬೀಳುತ್ತವೆ. ಕೂಡಲೇ ಗಣರಾಜ್ಯೋತ್ಸವಕ್ಕೆ ಶಾಲೆಗೆ ಬಣ್ಣ ಹೊಡೆಯುತ್ತಿದ್ದ ಊರಿನ ಹುಡುಗರನ್ನ ಕರೆದಿದ್ದಾರೆ. ಸುಮಾರು 150ಕ್ಕೂ ಅಧಿಕ ಗ್ರಾಮಸ್ಥರು ನಾಲ್ಕು ಮನೆಗಳ ಸುತ್ತಲೂ ಹೋಗಿ ನೋಡಿದ್ದಾರೆ. ಆದರೂ ಯಾರೂ ಕಂಡು ಬಂದಿಲ್ಲ.

ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದ ಮೇಲು ಕಲ್ಲುಗಳು ಮಳೆ ಸುರಿದಿದೆ. 150 ಸ್ಥಳೀಯರೊಂದಿಗೆ ಪೊಲೀಸರು ನಾಲ್ಕು ಮನೆಗಳ ಸುತ್ತ ಸುತ್ತುವರಿದಿದ್ದಾರೆ. ಬ್ಯಾಟರಿ ಬಿಟ್ಟು ಹುಡುಕಾಡಿದ್ದಾರೆ. ಆದರೆ ಕಲ್ಲು ಎಲ್ಲಿಂದ ಬರುತ್ತಿವೆ ಎಂದು ಅವರಿಗೂ ಅರ್ಥವಾಗಿಲ್ಲ. ಕೊನೆಗೆ ರಾತ್ರಿ 11 ಗಂಟೆವರೆಗೂ ನೋಡಿ, ಬೆಳಗ್ಗೆ ಡಾಗ್ ಸ್ಕ್ವಾಡ್ ತರುತ್ತೀವಿ ಎಂದು ವಾಪಸ್ ಹೋಗಿದ್ದಾರೆ.

ಮೇಲಿಂದ ಮೇಲೆ ಕಲ್ಲುಗಳು ಬಿಳುತ್ತಿದ್ದರಿಂದ ಮನೆಯೊಳಗಿದ್ದವರು ಮಕ್ಕಳನ್ನ ಕರೆದುಕೊಂಡು ಹೊರಬಂದಿದ್ದಾರೆ. ಮುಷ್ಠಿ ಗಾತ್ರದ ಕಲ್ಲುಗಳಿಂದ ಮನೆಯ ಹೆಂಚುಗಳು ಒಡೆದು ಕಲ್ಲು ಮನೆಯೊಳಗೆ ಬಿದ್ದಿವೆ. ರಾತ್ರಿ 11.15ರ ಬಳಿಕ ಕಲ್ಲು ಬೀಳೋದು ನಿಂತಿದೆ. ಆಗ ಎಲ್ಲರೂ ಮನೆಯೊಳಗೆ ಹೋಗಿ ಮಲಗಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತ್ತೆ ಕಲ್ಲುಗಳು ಬಿದ್ದಿದ್ದು, ಹೊನ್ನವಳ್ಳಿ ಜನ ಹಗಲಲ್ಲೂ ನೆಮ್ಮದಿಯಿಂದ ಇರದಂತಾಗಿದೆ. ಬೆಳಗ್ಗೆ ಮತ್ತೆ ಸ್ಥಳಕ್ಕೆ ಬಂದ ಪೊಲೀಸರು ಕಲ್ಲುಗಳನ್ನೆಲ್ಲಾ ಆಯ್ದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಹೊನ್ನವಳ್ಳಿಯ ಜನ 45-50 ವರ್ಷಗಳಿಂದ ಇಲ್ಲೇ ಬದುಕುತ್ತಿದ್ದಾರೆ. ಯಾವತ್ತೂ ಹೀಗೆ ಆಗಿರಲಿಲ್ಲ. ಈಗ ದಿಢೀರನೆ ಹೀಗೆ ಕಲ್ಲುಗಳು ಬೀಳುತ್ತಿರುವುದರಿಂದ ಊರಿನ ಜನ ಗಾಬರಿಕೊಂಡಿದ್ದು, ಇದೇನು ಬಾನಾಮತಿಯೋ, ದೈವವೋ, ದೆವ್ವವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂದು ಯಾವುದರ ಬಗ್ಗೆಯೂ ಸ್ಪಷ್ಟತೆ ಇಲ್ಲದೆ ಅಸ್ಪಷ್ಟರಾಗಿದ್ದಾರೆ. ಈ ಮಧ್ಯೆ ಗ್ರಾಮಸ್ಥರು ಎಲ್ಲಿಂದ ಕಲ್ಲು ಬೀಳುತ್ತಿವೆ. ಇದು ಯಾರ ಕೆಲಸ ಎಂದು ಪತ್ತೆ ಹಚ್ಚಿ ನಮಗೆ ನೆಮ್ಮದಿಯಿಂದ ಇರಲು ಅನುವು ಮಾಡಿಕೊಡಬೇಕೆಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *