ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿರುವ ಜೋಕರ್‌ನಂತೆ: ಜಮೀರ್ ವ್ಯಂಗ್ಯ

Public TV
1 Min Read

ಬೆಂಗಳೂರು: ಶಾಸಕ ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿ ಇರುವ ಜೋಕರ್‌ನಂತೆ ಎಂದು ಹೇಳುವ ಮೂಲಕ ಮಾಜಿ ಸಚಿವ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.

ನಗರದ ಗೋರಿಪಾಳ್ಯದ ಮೈದಾನದಲ್ಲಿ ಆಯೋಜನೆಗೊಂಡಿರುವ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೋಮಶೇಖರ್, ಅನಂತ್ ಕುಮಾರ್ ಹೆಗ್ಡೆಯಂತವರ ನಡುವೆ ಇರುವ ಜೋಕರ್‌ನಂತೆ ರೇಣುಕಾಚಾರ್ಯ. ಜೋಕರನ್ನು ಯಾರಾದ್ರೂ ಮಂತ್ರಿ ಮಾಡ್ತಾರಾ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋವಾದಲ್ಲಿ ಹೋಗಿ ಕುಳಿತುಕೊಂಡಿದ್ದು ಯಾರು ರೇಣುಕಾಚಾರ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.

ನಾನು ಖೋಟಾ ನೋಟು ಪ್ರಿಂಟ್ ಮಾಡಿದ್ದೀನಿ ಅಂತ ರೇಣುಕಾಚಾರ್ಯ ಹೇಳ್ತಾರೆ. ಗೋವಾದಲ್ಲಿ ಇದ್ದಾಗ ಅದೇ ಖೋಟಾ ನೋಟು ನಿಮಗೆ ನಾನು ಕೊಟ್ಟಿರಬಹುದು ಅಲ್ವಾ? ಈಗ ಯಡಿಯೂರಪ್ಪ ಚುನಾವಣೆ ಮಾಡಿದ್ರಲ್ಲ, ನಿಮಗೆ 30-40 ಕೋಟಿ ದುಡ್ಡು ಎಲ್ಲಿಂದ ಬಂತು? ನೀವು ಖೋಟಾ ನೋಟು ಪ್ರಿಂಟ್ ಮಾಡಿದ್ರಾ? ನಾವು ಅಣ್ಣ-ತಮ್ಮಂದಿರ ರೀತಿ ಬದುಕ್ತಾ ಇದ್ದೀವಿ. ರೇಣುಕಾಚಾರ್ಯ ಅದಕ್ಕೆಲ್ಲ ವಿಷ ಬಿತ್ತಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ನರ್ಸ್ ಜಯಲಕ್ಷ್ಮಿಗೆ ರೇಣುಕಾಚಾರ್ಯ ಬಗ್ಗೆ ಗೊತ್ತು!
ರೇಣುಕಾಚಾರ್ಯ ಎಂಥವನು ಅಂತ ನರ್ಸ್ ಜಯಲಕ್ಷ್ಮಿಗೆ ಬಹಳ ಚೆನ್ನಾಗಿ ಗೊತ್ತಿದೆ. ಯಾಕೆಂದರೆ ಚುಮ್ಮಾ ಚುಮ್ಮಾ ಅಂತ ಬಹಳ ಹತ್ತಿರದಿಂದ ನೋಡಿದ್ದಾರೆ. ಇದನ್ನೆಲ್ಲ ರೇಣುಕಾಚಾರ್ಯ ಇಲ್ಲಿಗೇ ಬಿಟ್ಟು ಬಿಡಬೇಕು ಎಂದು ಕಿಡಿಕಾರಿದ್ದಾರೆ.

ಇದಕ್ಕೂ ಮೊದಲು ಮೈದಾನಕ್ಕೆ ಆಗಮಿಸುತ್ತಿರೋ ಮಹಿಳೆಯನ್ನ ಸಾಲಿನಲ್ಲಿ ಬರುವಂತೆ ಶಾಸಕರು ನೋಡಿಕೊಂಡರು. ಕೈಯಲ್ಲಿ ಸಣ್ಣ ಪ್ಲಾಸ್ಟಿಕ್ ಪೈಪ್ ಹಿಡಿದು ಮಹಿಳೆಯರನ್ನ ಸಂಘಟಿಸಿದ್ದಾರೆ. ಆರ್ ಎಸ್‍ಎಸ್ ವಿರುದ್ಧ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದು, ಆರ್ ಎಸ್‍ಎಸ್‍ನವರನ್ನು ಚಕ್ಕಗಳು ಅಂತ ಕೂಗಿದ್ದಾರೆ. ಅಲ್ಲದೆ ಆರ್ ಎಸ್‍ಎಸ್, ಮೋದಿ, ಹಿಂದೂಗಳ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿ ಕಿಡಿಕಾರಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಮೈದಾನದಲ್ಲಿ ಮಹಿಳೆಯರು ಜಮಾಯಿಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *