30 ವರ್ಷದ ‘ಮೆಹನತ್’ ಶಾರುಖ್ ಖಾನ್‍ರ ‘ಮನ್ನತ್’

Public TV
2 Min Read

ಮುಂಬೈ: ಬಾಲಿವುಡ್ ಕಾ ಬಾದ್‍ಷಾ ಶಾರುಖ್ ಖಾನ್‍ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಭಾರತ ಮಾತ್ರವಲ್ಲ ವಿದೇಶದಲ್ಲೂ ಶಾರುಖ್ ಅಭಿನಯಕ್ಕೆ ಮನಸೋತ ಅಭಿಮಾನಿ ಬಳಗವಿದೆ. ಶಾರುಖ್ ಮಾತ್ರವಲ್ಲ ಅವರ ‘ಮನ್ನತ್’ ಬಂಗಲೆ ಕೂಡ ಸಿಕ್ಕಾಪಟ್ಟೆ ಫೇಮಸ್.

ಹೌದು. ಶಾರುಖ್ ಖಾನ್‍ಗೆ ಎಷ್ಟು ಅಭಿಮಾನಿಗಳು ಇದ್ದಾರೋ, ಅವರ ಮನ್ನತ್ ಬಂಗಲೆಗೂ ಕೂಡ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಮುಂಬೈನಲ್ಲಿ ಮನ್ನತ್ ಬಂಗಲೆ ಒಂದು ರೀತಿ ಪ್ರವಾಸಿ ತಾಣದಂತೆ ಆಗಿಬಿಟ್ಟಿದೆ. ಸಾಮಾನ್ಯವಾಗಿ ಮುಂಬೈಗೆ ಹೋಗುವ ಶಾರುಖ್ ಅಭಿಮಾನಿಗಳು ಮನ್ನತ್ ಬಂಗಲೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ವಾಪಸ್ ಬರಲ್ಲ. ಅಷ್ಟರ ಮಟ್ಟಿಗೆ ಮನ್ನತ್ ಬಂಗಲೆ ಫೇಮಸ್ ಆಗಿದೆ.

ಮುಂಬೈನ ಬಾಂದ್ರಾ ಬ್ಯಾಂಡ್‍ಸ್ಟ್ಯಾಂಡ್‍ನಲ್ಲಿ ಶಾರುಖ್ ಅವರ ಮನ್ನತ್ ಬಂಗಲೆ ಇದೆ. ಮುಂಬೈನ ಸಮುದ್ರ ತೀರದಲ್ಲಿ ಈ ಬಂಗಲೆ ಇದ್ದು, ಸುಂದರ ಪ್ರಕೃತಿಯ ಮಧ್ಯೆ ಐಷಾರಾಮಿ ಮನ್ನತ್ ಬಂಗಲೆ ಎಲ್ಲರ ಗಮನ ಸೆಳೆದಿದೆ. ಈ ಸುಂದರ ಮನ್ನತ್ ಬಂಗಲೆ ಈಗ ಅಂದಾಜು 200 ಕೋಟಿ ರೂ. ಬೆಲೆ ಬಾಳುತ್ತದೆ.

ಈ ಬಂಗಲೆ ನೋಡಿ ಆರ್ಕಷಿತಗೊಂಡ ಶಾರುಖ್ ಅಭಿಮಾನಿಯೋರ್ವ ಶಾರುಕ್‍ಗೆ ಟ್ವೀಟ್ ಮಾಡಿ, ‘ಸಾರ್ ನಿಮ್ಮ ಮನ್ನತ್ ಬಂಗಲೆಯಲ್ಲಿ ಒಂದು ರೂಮ್ ಬಾಡಿಗೆಗೆ ಬೇಕಿತ್ತು, ಎಷ್ಟು ಬಾಡಿಗೆ ಆಗುತ್ತೆ?’ ಎಂದು ಪ್ರಶ್ನಿಸಿದ್ದನು. ಇದಕ್ಕೆ ರೀ-ಟ್ವೀಟ್ ಮಾಡಿದ ಶಾರುಕ್, ’30 ವರ್ಷ ಶ್ರಮ ಪಡಬೇಕಾಗುತ್ತೆ’ ಎಂದು ಕೂಲ್ ಉತ್ತರ ನೀಡುವ ಮೂಲಕ ಮನ್ನತ್ ಬಂಗಲೆಗಾಗಿ ತಾವು 30 ವರ್ಷ ಶ್ರಮಿಸಿದ ಬಗ್ಗೆ ತಿಳಿಸಿದ್ದಾರೆ. ಈ ಟ್ವೀಟ್ ಸದ್ಯ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಶಾರುಖ್ ಉತ್ತರಕ್ಕೆ ಮನಸೋತಿದ್ದಾರೆ.

ಕಷ್ಟಪಟ್ಟು, ಶ್ರಮಿಸಿ ಬಾಲಿವುಡ್‍ನಲ್ಲಿ ಹೆಸರು ಮಾಡಿದ ಕಲಾವಿದರಲ್ಲಿ ಶಾರುಖ್ ಕೂಡ ಒಬ್ಬರು. ದೆಹಲಿ ಮೂಲದವರಾದ ಶಾರುಖ್ ಬಾಲಿವುಡ್‍ಗೆ ಕಾಲಿಟ್ಟ ಮೇಲೆ ಸೆಟೆಲ್ ಆಗಿದ್ದು ಮುಂಬೈನಲ್ಲಿ. 2001ರಲ್ಲಿ ಶಾರುಖ್ ಅವರು ಮನ್ನತ್ ಬಂಗಲೆಯನ್ನು ಲೀಜ್‍ಗೆ ಪಡೆದಾಗ ಅದರ ಹೆಸರು ವಿಲ್ಲಾ ವಿಯೆನಾ ಎಂದಿತ್ತು. ಬಳಿಕ ಅದನ್ನು ಶಾರುಕ್ ಖರೀದಿಸಿದ ಬಳಿಕ ಅದಕ್ಕೆ ಮನ್ನತ್ ಎಂದು ಹೆಸರಿಟ್ಟರು. ಈ ಮನ್ನತ್ ಶಾರುಕ್ ಅವರ ಜೀವನದಲ್ಲಿ ಖರೀದಿಸಿದ ಬಹು ದುಬಾರಿ ವಸ್ತು ಎಂದು ಸ್ವತಃ ಶಾರುಕ್ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಳೆದ ವರ್ಷ ಒಂದು ರೆಡಿಯೋ ಸಂದರ್ಶನದಲ್ಲಿ ಶಾರುಖ್ ತಾವು ಹೇಗೆ ತಮ್ಮ ಕನಸಿನ ಮನ್ನತ್ ಬಂಗಲೆ ಖರೀದಿಸಿದರು ಎಂಬುದನ್ನ ಹಂಚಿಕೊಂಡಿದ್ದರು. ನಾನು ದೆಹಲಿ ಹುಡುಗ, ದೆಹಲಿಯ ಮಂದಿ ಹೆಚ್ಚಾಗಿ ಬಂಗಲೆಗಳಲ್ಲಿ ವಾಸಿಸುತ್ತಾರೆ. ಆದರೆ ನಾನು ಮುಂಬೈಗೆ ಬಂದಾಗ ಪತ್ನಿ ಗೌರಿ ಜೊತೆಗೆ ಮೊದಲು ಅಪಾರ್ಟ್‌ಮೆಂಟ್‍ನಲ್ಲಿ ವಾಸಿಸುತ್ತಿದ್ದೆ. ಆಗ ನನ್ನ ಅತ್ತೆ ಇಷ್ಟು ಚಿಕ್ಕ ಮನೆಯಲ್ಲಿ ಹೇಗೆ ಇರುತ್ತೀರಾ ಅನ್ನುತ್ತಿದ್ದರು. ಮೊದಲ ಬಾರಿಗೆ ಮನ್ನತ್ ಬಂಗಲೆ ನೋಡಿದಾಗ ನನಗೆ ದೆಹಲಿಯ ಬಂಗಲೆ ನೆನಪಾಯ್ತು. ಅದಕ್ಕೆ ನಾನು ಅದನ್ನ ಖರೀದಿಸಿದೆ. ಇದು ನಾನು ನನ್ನ ಜೀವನದಲ್ಲಿ ಖರೀದಿಸಿದ ಅತ್ಯಂತ ದುಬಾರಿ ವಸ್ತು ಎಂದು ತಿಳಿಸಿದ್ದರು.

ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟರಿಗೂ ಶಾರುಖ್ ಅವರ ಮನ್ನತ್ ಬಂಗಲೆ ಮೇಲೆ ಕಣ್ಣಿದೆ. ಶಾರುಖ್ ಅವರ ಆತ್ಮೀಯ ಗೆಳೆಯ ಸಲ್ಮಾನ್ ಖಾನ್ ಕೂಡ ಮನ್ನತ್ ಬಂಗಲೆಯ ಸೌಂದರ್ಯ ಸೋತು ಅದನ್ನು ಖರೀದಿಸಬೇಕು ಅಂದುಕೊಂಡಿದ್ದರು. ಆದರೆ ಅವರ ತಂದೆ ಬೇಡ ಎಂದಿದ್ದಕ್ಕೆ ಸಲ್ಲು ಸುಮ್ಮನಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *