ಮನೆಗೆ ಕೊಟ್ಟ ಗ್ಯಾಸ್ ಸಿಲಿಂಡರ್ ಸೇಲ್- ಬ್ಲ್ಯಾಕ್‍ನಲ್ಲಿ ಸಿಗ್ತಿದೆ ಸಬ್ಸಿಡಿ ಸಿಲಿಂಡರ್!

Public TV
2 Min Read

ಬೆಂಗಳೂರು: ಎಲ್‍ಪಿಜಿ ಗ್ಯಾಸ್ ಗಳ ಕಳ್ಳಾಟ ಈಗ ಬಾರಿ ಸದ್ದು ಮಾಡುತ್ತಿದೆ. ಸಬ್ಸಿಡಿಗೆ ಸಿಕ್ಕ ಗ್ಯಾಸ್ ಸಿಲಿಂಡರ್ ರೋಡ್ ರೋಡ್‍ನಲ್ಲಿ ಹರಾಜು ಆಗುತ್ತಿದೆ. ಪ್ರತಿ ತಿಂಗಳು ಗ್ಯಾಸ್ ದರ ಏರಿಕೆ ಆಗುತ್ತಲೇ ಇದೆ. ಬೆಲೆಯೇರಿಕೆಯಿಂದ ಬೇಸತ್ತವರು ಈಗ ಕಳ್ಳ ಮಾರ್ಗ ಹಿಡಿದಿದ್ದಾರೆ. ದುಡ್ಡಿನ ಆಸೆಗೆ ಸಬ್ಸಿಡಿ ಸಿಲಿಂಡರ್ ಬ್ಲ್ಯಾಕ್‍ನಲ್ಲಿ ಪಬ್ಲಿಕ್‍ನಿಂದಲೇ ಸೇಲ್ ಆಗುತ್ತಿದೆ.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗುತ್ತಲೇ ಇದೆ. ಅದೇ ಪ್ರಮಾಣದಲ್ಲಿ ಗ್ಯಾಸ್ ಬೇಡಿಕೆಯೂ ಏರಿಕೆಯಾಗುತ್ತಿದೆ. ಇದೇ ಬಹುತೇಕ ಜನರ ಜೇಬು ತುಂಬಿಸುತ್ತಿದೆ. ಸಬ್ಸಿಡಿಯಲ್ಲಿ ವರ್ಷಕ್ಕೆ ಏನಿಲ್ಲ ಅಂದರೂ 12 ಗ್ಯಾಸ್ ಸಿಲಿಂಡರ್ ಸಿಗುತ್ತದೆ. ಮನೆಗೆ ಸಿಕ್ಕ ಗ್ಯಾಸ್ ಸಿಲಿಂಡರನ್ನು ಈಗ ಬಹುತೇಕರು ಸಿಲಿಕಾನ್ ಸಿಟಿಯಲ್ಲಿ ಮಾರಾಟ ಮಾಡೋದು ಪಬ್ಲಿಕ್ ಟಿವಿ ಕಣ್ಣಿಗೆ ಬಿದ್ದಿದೆ. ಸಾಮಾನ್ಯವಾಗಿ ಏಜೆನ್ಸಿಯವರು ಮಾಡುವ ದಂಧೆಯನ್ನು ಈಗ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುವ ಬಹುತೇಕ ಜನರೇ ವ್ಯಾಪಾರಿಗಳಿಗೆ ದುಪ್ಪಟ್ಟು ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಗೃಹಬಳಕೆಯ ಗ್ಯಾಸ್ ದರ 717 ರೂ. ಅದೇ ವಾಣಿಜ್ಯ ಬಳಕೆಯ ಗ್ಯಾಸ್ ದರ 1290. ಹೀಗಾಗಿ ಬಡ ವ್ಯಾಪಾರಿಗಳು ಈಗ ಕಳ್ಳ ಮಾರ್ಗ ತುಳಿದಿದ್ದಾರೆ.

ರಸ್ತೆ ಬದಿಯ ವ್ಯಾಪಾರಿಗಳು, ಸಣ್ಣ ಪುಟ್ಟ ಹೋಟೆಲ್‍ನವರು ಗ್ಯಾಸ್ ಸಿಲಿಂಡರ್ ಖರೀದಿ ಹಾಗೂ ಮಾರಾಟದ ವಹಿವಾಟು ನೋಡುತ್ತಿದ್ದಾರೆ. ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಕದ್ದು ಮುಚ್ಚಿ ವ್ಯಾಪಾರಕ್ಕೆ ಇಳಿದಿದ್ದಾರೆ.

ವ್ಯಾಪಾರಿಗಳು ಗ್ಯಾಸ್ ಹೊರೆಯಿಂದಾಗಿ ಕಳ್ಳ ಮಾರ್ಗ ಹಿಡಿದಿರುವ ಬಗ್ಗೆ ಹೀಗೆ ವಿವರಿಸುತ್ತಾರೆ.
ಪ್ರತಿನಿಧಿ: ಎಣ್ಣೆ ರೇಟು, ಗ್ಯಾಸ್ ರೇಟು ಜಾಸ್ತಿ ಆಯ್ತು, ವರ್ಕ್ ಆಗುತ್ತಾ?
ವ್ಯಾಪಾರಿ: ಆಗಲ್ಲ, ಆದ್ರೆ ಬೇರೆ ಮಾಡೋಕೆ ಬರಲ್ವಲ್ಲಾ?
ಪ್ರತಿನಿಧಿ: ಮನೆ ಗ್ಯಾಸ್ ಬಳಸ್ತಾ ಇದ್ದೀರಿ, ಗ್ಯಾಸ್ ಬೆಲೆ ಎಷ್ಟು?
ವ್ಯಾಪಾರಿ: ಅದಾ.. 717 ಇದೆ.
ಪ್ರತಿನಿಧಿ: ಜಾಸ್ತಿ ಆಯ್ತು ಅಂತ ಹೀಗೆ ಮಾಡ್ತಾ ಇದ್ದೀರಾ.
ವ್ಯಾಪಾರಿ: ಇಲ್ಲ ಸ್ವಲ್ಪ ಮನೆಯಲ್ಲಿ ಉಳಿದಿತು, ಕಮರ್ಷಿಯಲ್ ಖಾಲಿ ಅಂತ ತಂದಿದ್ದೀವಿ.

ಆದರೆ ಬ್ಲ್ಯಾಕ್ ಗ್ಯಾಸ್ ದಂಧೆ ಬಗ್ಗೆ ಮಾಹಿತಿ ಇರುವ ವ್ಯಾಪಾರಿಗಳು ಬಾಯಿ ಬಿಡಲ್ಲ.
ಪ್ರತಿನಿಧಿ: ಡಬಲ್ ಸಿಲಿಂಡರ್ ಆಗಿದ್ರೆ ಅವ್ರೇ ನಿಮಗೆ ಕೊಡ್ತಾರೆ
ವ್ಯಾಪಾರಿ: ಹು ಬ್ಲ್ಯಾಕ್ ಕೊಡ್ತಾರೆ
ಪ್ರತಿನಿಧಿ: ಈಗ ಮತ್ತೆ 40 ರೂ ಜಾಸ್ತಿ ಆಯ್ತಲ್ಲ
ವ್ಯಾಪಾರಿ: ಪರವಾಗಿಲ್ಲ, ಏನ್ ಮಾಡೋದು?
ಪ್ರತಿನಿಧಿ: ಜಾಸ್ತಿ ಇದ್ರೆ ಗ್ಯಾಸ್ ಕಷ್ಟ
ವ್ಯಾಪಾರಿ: ಹು.. ಹೌದು

ಈ ದಂಧೆಗೆ ಮೂಲ ಗ್ರಾಹಕರೇ ಕಾರಣ ಎಂದು ಗ್ಯಾಸ್ ಏಜೆನ್ಸಿಯವರು ಹೇಳುತ್ತಾರೆ. ಪ್ರತಿ ವರ್ಷ 12 ಸಿಲಿಂಡರ್ ಸಿಗಲಿದೆ. ಅದನ್ನ ಬಳಸಲು ಆಗದೇ ಹೀಗೆ ಬ್ಲ್ಯಾಕ್ ಮಾರಾಟ ಮಾಡುತ್ತಿದ್ದಾರೆ.

ಗ್ಯಾಸ್ ದರ ಏರಿಕೆಯ ಮಾಹಿತಿ ಹೀಗಿದೆ:
ಗೃಹಬಳಕೆ ಗ್ಯಾಸ್ ಗೆ ಹಿಂದಿನ ದರ 504 ಇದ್ದು, ಪ್ರಸಕ್ತ 717 ರೂ. ಇದೆ. ವಾಣಿಜ್ಯ ಗ್ಯಾಸ್ ಹಿಂದಿನ ದರ 960ರೂ. ಇತ್ತು. ಆದರೆ ಈಗ 1290 ರೂ. ಏರಿಕೆಯಾಗಿದೆ.

ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಆಯಿಲ್ ಕಂಪನಿ ವಿಚಕ್ಷಣ ದಳ, ಆಹಾರ, ನಾಗರಿಕ ಸರಬರಾಜು ಇಲಾಖೆ ಗೃಹಬಳಕೆ ಸಿಲಿಂಡರ್ ಕಮರ್ಷಿಯಲ್‍ಗೆ ಮಾರಾಟವಾಗೋದನ್ನು ತಡೆಯಬಹುದಾಗಿದೆ ಎಂದು ಗ್ಯಾಸ್ ಏಜೆನ್ಸಿಯ ಚಂದ್ರಶೇಖರ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *