2.45 ಕೋಟಿ ಗಡಿದಾಟಿದ ಶೇನ್ ವಾರ್ನ್ ‘ಬ್ಯಾಗಿ ಗ್ರೀನ್’ ಕ್ಯಾಪ್ ಬೆಲೆ

Public TV
3 Min Read

– ಹರಾಜಿನ ಹಣ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಸರ್ಮಪಣೆ

ಕಾನ್ಬೆರಾ: ಆಸ್ಪ್ರೇಲಿಯಾದ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ `ಬ್ಯಾಗಿ ಗ್ರೀನ್’ ಖರೀದಿಸಲು ಅಭಿಮಾನಿಗಳು ಮುಗಿಬಿದ್ದಿದ್ದು, ಈಗಾಗಲೇ ಈ ಕ್ಯಾಪ್ ಬೆಲೆ 5 ಲಕ್ಷ ಆಸ್ಪ್ರೇಲಿಯನ್ ಡಾಲರ್(ಅಂದಾಜು 2.45 ಕೋಟಿ ರೂ.) ಗಡಿದಾಟಿದೆ.

ಬ್ಯಾಗಿ ಗ್ರೀನ್ ಕ್ಯಾಪ್ ಟೆಸ್ಟ್ ಗೆ ಪಾದಾರ್ಪಣೆ ಮಾಡುವಾಗ ನೀಡುವ ಕ್ಯಾಪ್ ಆಗಿದ್ದು, ಇದನ್ನು ವಾರ್ನ್ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ಸಂಗ್ರಹಿಸಲು ಹರಾಜಿಗಿಟ್ಟಿದ್ದಾರೆ. ಕಾಡ್ಗಿಚ್ಚಿನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಹಣ ಸಂಗ್ರಹಿಸುವ ಪ್ರಯತ್ನದಲ್ಲಿರುವ ವಾರ್ನ್ ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದಾರೆ. ಜನವರಿ 6ರಂದು ಆರಂಭಗೊಂಡ ಈ ಹರಾಜು ಪ್ರಕ್ರಿಯೆ ಜನವರಿ 10ರ ವರೆಗೂ ನಡೆಯಲಿದೆ. ಇದನ್ನೂ ಓದಿ: ಬೆತ್ತಲೆ ಫೋಟೋ ಮಾರಾಟ ಮಾಡಿ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ 5 ಕೋಟಿ ಸಂಗ್ರಹಿಸಿದ ಯುವತಿ

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಧರಿಸಿದ ಬ್ಯಾಗಿ ಗ್ರೀನ್ ಕ್ಯಾಪ್‍ನ ಬೆಲೆ ಈಗಾಗಲೇ 5,00,000 ಆಸ್ಪ್ರೇಲಿಯನ್ ಡಾಲರ್(ಅಂದಾಜು 2.45 ಕೋಟಿ ರೂ.) ಗಡಿದಾಟಿದೆ. ವಾರ್ನ್ ಕ್ಯಾಪ್ ಖರೀದಿಸಲು ತಾ ಮುಂದು ನಾ ಮುಂದು ಎಂದು ಅಭಿಮಾನಿಗಳು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ 10ರೊಳಗೆ ಈ ಮೊತ್ತ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದ್ದು, ವಾರ್ನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಯಾರ ಪಾಲಾಗಲಿದೆ ಎನ್ನುವುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

ತನ್ನ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿರುವ ಬಗ್ಗೆ ಸ್ವತಃ ವಾರ್ನ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಜೊತೆಗೆ ಭಾರೀ ಮೊತ್ತ ನೀಡಿ ಕ್ಯಾಪ್ ಖರೀದಿಸಲು ಆಸಕ್ತಿ ತೋರಿದವರಿಗೆ ಧನ್ಯವಾದ ತಿಳಿಸಿದ್ದಾರೆ. 2003ರಲ್ಲಿ ಕ್ರಿಕೆಟ್ ಆಟಗಾರ ಸರ್ ಡೊನಾಲ್ಡ್ ಬ್ರಾಡ್ಮನ್ ಅವರು ತಮ್ಮ ಟೆಸ್ಟ್ ಕ್ಯಾಪ್ ಅನ್ನು ಹರಾಜಿಗಿಟ್ಟಿದ್ದರು. ಆಗ 4,25,000 ಆಸ್ಪ್ರೇಲಿಯನ್ ಡಾಲರ್ ಗೆ ಕ್ಯಾಪ್ ಹರಾಜಾಗಿತ್ತು. ಈ ದಾಖಲೆಯನ್ನು ವಾರ್ನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜು ಹಿಂದಿಕ್ಕಿದೆ.

ವಾರ್ನ್ ಅವರು ಆಸ್ಟ್ರೇಲಿಯಾಕ್ಕಾಗಿ 104 ಟೆಸ್ಟ್ ಮ್ಯಾಚ್‍ಗಳನ್ನು ಆಡಿದ್ದಾರೆ. ಅದರಲ್ಲಿ 708 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ. ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ವಾರ್ನ್ 2ನೇ ಸ್ಥಾನದಲ್ಲಿದ್ದಾರೆ.

ಆಸ್ಪ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚು ವಿಶ್ವವನ್ನೇ ನಡುಗಿಸಿದ್ದು, ಆಸ್ಪ್ರೇಲಿಯಾದ ಟೆನ್ನಿಸ್ ಆಟಗಾರರು, ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಈವರೆಗೆ ಸುಮಾರು 25ಕ್ಕೂ ಹೆಚ್ಚು ಮಂದಿ ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಲಕ್ಷಗಟ್ಟಲೆ ಕಾಡು ಪ್ರಾಣಿಗಳು, ಪಕ್ಷಿಗಳು ಜೀವ ಕಳೆದುಕೊಂಡಿವೆ.

ಸಾಮಾಜಿಕ ಜಾಲತಾಣಗಳಲ್ಲಿ `ಪ್ರೇ ಫಾರ್ ಆಸ್ಟ್ರೇಲಿಯಾ’ ಎಂದು ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಫೋಟೋಗಳು, ಸುಟ್ಟು ಕರಕಲಾಗಿರುವ ಪ್ರಾಣಿಗಳ ಮೃತದೇಹಗಳ ಫೋಟೋಗಳು ಹಾಗೂ ಸಹಾಯಕ್ಕಾಗಿ ಜನರ ಕಾಲು ಹಿಡಿದ ಕಾಂಗರುಗಳು ಹಾಗೂ ಇತರೆ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತಿದೆ.

ಇತ್ತ ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *