ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

Public TV
2 Min Read

-ನೀರು ಉಳಿಸಲು ಸರ್ಕಾರ ಚಿಂತನೆ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

ಈ ಕುರಿತು ಮಾತನಾಡಿರುವ ಮಾರಿಟಾ ಬೇಕರ್ ಎಂಬ ಅಧಿಕಾರಿ, ಕಾಡ್ಗಿಚ್ಚಿನ ಪರಿಣಾಮದಿಂದ ಇಡೀ ದೇಶವೇ ಸುಟ್ಟು ಹೋಗಿದೆ. ಅಲ್ಲದೇ ಬೆಂಕಿಯಿಂದ ಬಿಸಿಯ ಪ್ರಮಾಣ ಹೆಚ್ಚಾಗಿದ್ದು, ಕನಿಷ್ಠ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಪರದಾಡುತ್ತಿದ್ದೇವೆ. ಇದೇ ವೇಳೆ ಒಂಟೆಗಳು ವಸತಿ ಪ್ರದೇಶಗಳಿಗೆ ನುಗ್ಗಿ ಸಂಗ್ರಹಿಸಿದ್ದ ನೀರನ್ನು ಕುಡಿಯುತ್ತಿವೆ. ಅಲ್ಲದೇ ಈ ವೇಳೆ ಒಂಟೆಗಳ ವ್ಯರ್ಥದಿಂದಲೂ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

ಕಳೆದ ನವೆಂಬರ್ ನಲ್ಲಿ ಆರಂಭವಾದ ಕಾಡ್ಗಿಚ್ಚು ಆಸ್ಟ್ರೇಲಿಯಾ ಜನರ ಪರಿಸ್ಥಿತಿಯನ್ನೇ ಬದಲಿಸಿದೆ. ಇದರಿಂದ ದೇಶದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ದರಿಂದಲೇ ಕಾನೂನಿನ ನಿಯಮಗಳ ಅನ್ವಯವೇ ಒಂಟೆಗಳ ಹತ್ಯೆಗೆ ಅನುಮತಿ ಪಡೆಯಲಾಗಿದೆ. ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಡ್ಗಿಚ್ಚಿನಲ್ಲಿ ಇದುವರೆಗೂ 480 ಮಿಲಿಯನ್ ಪ್ರಾನಿಗಳು ಸಾವನ್ನಪ್ಪಿರುವುದಾಗಿ ಸರ್ಕಾರ ಅಂದಾಜು ಮಾಹಿತಿ ನೀಡಿದೆ.

ಆಸ್ಟ್ರೇಲಿಯಾದ ಕಾಡ್ಗಿಚ್ಚು ವಿಶ್ವವನ್ನೇ ಆತಂಕಗೊಳಿಸಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಪ್ರಾಣಿಗಳು ಬೆಂಕಿಗೆ ಸುಲಿಕಿ ಸಾವನ್ನಪ್ಪಿದ್ದರೆ ಒಂಟೆಗಳಿಗೆ ಉಸಿರುಗಟ್ಟಿದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಒಂಟೆಗಳು ನೀರು ಕುಡಿಯುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಒಂಟೆಗಳು ಮತ್ತಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದೆ. ಇದು ಕಾಡಂಚಿನ ಭಾಗದಲ್ಲಿ ಇರುವ ಜನರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿಶ್ವದ ಪ್ರಾಣಿ ಪ್ರಿಯ ಸಂಘಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಸಮಸ್ಯೆಗೆ ಬೇರೊಂದು ಉಪಾಯ ಕಂಡು ಹಿಡಿಯುವಂತೆ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *