ಮನೆಗೆ ಬಂದಾಗ ಆಂಧ್ರ ಊಟ ಇಷ್ಟಪಡ್ತಿದ್ದರು- ಅನಂತ್‍ಕುಮಾರ್ ನೆನಪಿಸಿಕೊಂಡ ವೆಂಕಯ್ಯ ನಾಯ್ಡು

Public TV
2 Min Read

– ಅದಮ್ಯ ಚೇತನ ವೀಕ್ಷಿಸಿದ ಉಪರಾಷ್ಟ್ರಪತಿ
– ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಿ

ಬೆಂಗಳೂರು: ಅಗತ್ಯವಿರುವ ಮಕ್ಕಳಿಗೆ ಆಹಾರ ನೀಡುತ್ತಿರುವ ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ದೆಹಲಿಗೆ ಹೋದಾಗ ದಿವಂಗತ ಅನಂತ್ ಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.

ನಗರದಲ್ಲಿ ಇಂದು ಅದಮ್ಯ ಚೇತನದ ಪರಿಸರ ಸ್ನೇಹಿ ಅಡುಗೆ ಮನೆಯನ್ನ ವೀಕ್ಷಿಸಿದ ಉಪರಾಷ್ಟ್ರಪತಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದರು. ಅಲ್ಲದೆ ಅದಮ್ಯ ಚೇತನದ ಬಗ್ಗೆ ಖುಷಿ ವ್ಯಕ್ತಪಡಿಸಿದರು.

ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ನಾನು ದೆಹಲಿಗೆ ಹೋದಾಗ ಅನಂತಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ನಾನು ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ. ನಮ್ಮ ಮನೆಗೆ ಬಂದಾಗ ಆಂಧ್ರ ಊಟವನ್ನು ಬಹಳ ಇಷ್ಟಪಟ್ಟು ಅನಂತಕುಮಾರ್ ಸವಿಯುತ್ತಿದ್ದರು. ಇಲ್ಲಿ ಭೇಟಿ ನೀಡಿದಾಗ ನನಗೆ ಇಲ್ಲಿನ ಕೆಲಸಗಾರರ ಶ್ರದ್ಧೆ ಬಹಳ ಇಷ್ಟ ಆಯಿತು. ಶ್ರದ್ಧೆಯಿಂದ ತಯಾರಿಸುವ ಆಹಾರದ ಖುಷಿಯನ್ನು ಇಲ್ಲಿ ಕಂಡಿದ್ದೇನೆ. ಶೇ.38.7ರಷ್ಟು ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಾವು ತಿನ್ನುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಇದೆ ಎಂದರು.

ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಮಾಜ ಇದರ ಬಗ್ಗೆ ಗಮನ ನೀಡಿ, ಮಕ್ಕಳ ಆಹಾರ ಪರಿಸ್ಥಿತಿಯ ಬಗ್ಗೆ ಗಮನ ನೀಡಬೇಕು. ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೇವೆ ಮಾಡಬೇಕು ಎಂದರೆ ಅದಮ್ಯ ಚೇತನದಂತಹ ಸಂಸ್ಥೆಗಳ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ರು.

ಯಾವುದೇ ಲಾಭದ ಆಸೆ ಇಲ್ಲದೆ ನೀಡುತ್ತಿರುವ ಈ ಸೇವೆ ಶ್ಲಾಘನೀಯ. ಅದಮ್ಯ ಚೇತನ ಸಂಸ್ಥೆಯಿಂದ ಒಂದು ಗುರಿಗಾಗಿ ಕೆಲಸ ಮಾಡುತ್ತಿರುವುದು ಸಂತಸದಾಯಕವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯ ಹಾಳಾದರೆ ನಮ್ಮ ಅರ್ಥಿಕತೆಗೂ ಹೊಡೆತ ಬೀಳುತ್ತದೆ. ಅಪೌಷ್ಠಿಕತೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಇಂತಹ ಸಂಧರ್ಭದಲ್ಲಿ ಆದಮ್ಯ ಚೇತನ ಸಂಸ್ಥೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು. ಶೂನ್ಯ ತ್ಯಾಜ್ಯ ಅಡುಗೆ ಮನೆ/ಹಸಿರು ಅಡುಗೆ ಮನೆ ಮಾಡಿರುವುದು ಸಣ್ಣ ಸಾಧನೆ ಅಲ್ಲ. ಅದಮ್ಯ ಚೇತನ ಇನ್ನೂ ಹಲವು ಕೆಲಸಗಳನ್ನ ಮಾಡುವಂತಾಗಲಿ ಎಂದು ತಿಳಿಸಿದರು.

ಅನಂತ್ ಕುಮಾರ್, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಸ್ನೇಹಿತರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ ಎಂದು ಇಬ್ಬರು ಅಗಲಿದ ನಾಯಕರನ್ನು ವೆಂಕಯ್ಯ ನಾಯ್ಡು ಇದೇ ವೇಳೆ ನೆನಪು ಮಾಡಿಕೊಂಡರು.

ಬಳಿಕ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ವೆಂಕಯ್ಯನಾಯ್ಡು ಅವರು ಅನಂತ್ ಕುಮಾರ್ ಅವರ ಒಡನಾಡಿಗಳು. ಬಹುಕಾಲದಿಂದ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದವರು. ಸಂಪುಟದ ಸಹೋದ್ಯೋಗಿಗಳಾಗಿ ಕೆಲಸ ಮಾಡಿದವರು. ಅದಮ್ಯ ಚೇತನದ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಶೂನ್ಯ ತ್ಯಾಜ್ಯ, ಹಸಿರು ಅಡುಗೆಮನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಕಾರ್ಯ ಇದಾಗಿದೆ. ಇಂತಹ ಸತ್ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ವೆಂಕಯ್ಯನಾಯ್ಡು ಆಗಮನ ನಮಗೆ ಖುಷಿ ತಂದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *