ಕಾಡಿಗೆ ಓಡಿಸುವಾಗ ಅಟ್ಟಿಸಿಕೊಂಡು ಬಂದ ಕಾಡಾನೆಗಳು – ಮರವೇರಿ ಪ್ರಾಣ ಉಳಿಸಿಕೊಂಡ ಸಿಬ್ಬಂದಿ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ 10ಕ್ಕೂ ಹೆಚ್ಚು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಳೆದ ಎರಡು ದಿನಗಳಿಂದ ಇಂಜಿಲಗೆರೆ ಪುಲಿಯೇರಿ ಹಾಗೂ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿತ್ತು. ಹೀಗಾಗಿ ವಿರಾಜಪೇಟೆ ವಿಭಾಗದ ಎಸಿಎಫ್ ರೋಶಿನಿ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಕಾಡಾನೆಗಳ ಹಿಂಡುಗಳನ್ನು ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸುವ ಮೂಲಕ ಅರಣ್ಯಕ್ಕೆ ಅಟ್ಟಲಾಯಿತು.

ಈ ಸಂದರ್ಭದಲ್ಲಿ ಎರಡು ಕಾಡಾನೆಗಳು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಬಂದಿದೆ. ಭಯದಿಂದ ಸಿಬ್ಬಂದಿ ಮರವನ್ನೇರಿ ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಆದರೆ ಛಲಬಿಡದ ಅರಣ್ಯ ಸಿಬ್ಬಂದಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಮಾಲ್ದಾರೆ ಅರಣ್ಯಕ್ಕೆ ಅಟ್ಟಿಸಿದರು. ಈ ಸಂದರ್ಭದಲ್ಲಿ 6 ದೊಡ್ಡ ಆನೆಗಳು 4 ಮರಿಯಾನೆಗಳು ಕಂಡು ಬಂದಿದೆ.

ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಮರಿ ಹಾಕಿರುವ ಕಾಡಾನೆಗಳು ಕಾಫಿ ಹಣ್ಣುಗಳನ್ನು ತಿಂದು ರುಚಿ ಕಂಡುಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯಕ್ಕೆ ತೆರಳಿದ ಆನೆಗಳು ಹಿಂತಿರುಗಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಇದರಿಂದಾಗಿ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಎರಡು ಕಾಡಾನೆಗಳನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಭರವಸೆಯನ್ನು ನೀಡಿದ್ದರು. ಆದರೆ ಈವರೆಗೂ ಸೆರೆ ಹಿಡಿಯಲಿಲ್ಲ. ಸಿದ್ದಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳು ಮಿತಿಮೀರಿದ್ದು ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *