ಶೃಂಗೇರಿ ವಿದ್ಯಾರ್ಥಿನಿ ರೇಪ್ ಕೇಸ್ – ಆರೋಪ ಸಾಬೀತು, ಶಿಕ್ಷೆಯಷ್ಟೇ ಬಾಕಿ

Public TV
2 Min Read

ಚಿಕ್ಕಮಗಳೂರು: ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ಹಾಗೂ ಕೊಲೆಗೈದಿದ್ದ ಇಬ್ಬರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವಷ್ಟೇ ಬಾಕಿ ಉಳಿದಿದೆ.

2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದ್ದ ಈ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲು ದಾರಿಯಲ್ಲಿ ಮನೆಗೆ ಹೋಗ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನ ಅದೇ ಊರಿನ ಪ್ರದೀಪ್ ಹಾಗೂ ಸಂತೋಷ್ ಎಂಬುವರು ಅತ್ಯಾಚಾರಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ರು. ಇದರಿಂದ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸುವುಕ್ಕೂ ಹೆತ್ತವರು ಯೋಚಿಸಿದ್ದರು. ಆದ್ರೀಗ, ಮೂರು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರ ಮೇಲಿನ ಆರೋಪ ಸಾಬೀತಾಗಿದೆ.

ಏನಿದು ಪ್ರಕರಣ?
2016, ಫೆಬ್ರವರಿ 16ರಂದು ಜಿಲ್ಲೆಯ ಶೃಂಗೇರಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅದೇ ಊರಿನ ಸಂತೋಷ್ ಹಾಗೂ ಪ್ರದೀಪ್ ಎಂಬುವರು ಅತ್ಯಾಚಾರಗೈದು ಕೊಲೆ ಮಾಡಿದ್ರು. ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿದ್ದ ಕಾರಣ ಬೇಗ ಮನೆಗೆ ಹೋಗಿ ಓದಿಕೊಳ್ಳೋಣವೆಂದು ದಿನನಿತ್ಯದ ದಾರಿ ಬಿಟ್ಟು ಕಾಲುದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಇಬ್ಬರು ಯುವಕರು ಅತ್ಯಾಚಾರಗೈದು, ಕೊಲೆಮಾಡಿ ಗಿಡಗಂಟೆಗಳಿಂದ ತುಂಬಿದ್ದ 50 ಅಡಿಯ ಪಾಳುಬಾವಿಯೊಂದಕ್ಕೆ ಎಸೆದಿದ್ದರು. ಘಟನೆ ಹೊರಬಂದ ನಂತರ ಪೊಲೀಸರು ಪ್ರಕರಣದ ಬೆನ್ನು ಬೀಳುತ್ತಿದ್ದಂತೆ ಇಬ್ಬರು ಆರೋಪಿಗಳಲ್ಲಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ, ಮತ್ತೋರ್ವ ಪೊಲೀಸರ ಅತಿಥಿಯಾಗಿದ್ದ. ಈ ಕೇಸ್ ಹೊರತುಪಡಿಸಿಯೂ ಇಬ್ಬರ ಮೇಲೂ ಹಲವು ಕೇಸ್‍ಗಳಿದ್ದು, ಇದೀಗ ಮೂರು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆಸಿರೋ ಜಿಲ್ಲಾ ಸತ್ರ ನ್ಯಾಯಾಲಯ ಸೆಕ್ಷನ್ 376 (ಡಿ), 302, 201 376 (2) (ಎಂ) ಸೆಕ್ಷನ್ ಅಡಿ ಇವರ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ.

ಈಡೇರಿದ ಊರಿನವರ ಆಸೆ:
ಈ ಇಬ್ಬರು ಆರೋಪಿಗಳಿಗೆ ನೇಣಿಗೆ ಹಾಕಬೇಕು ಎಂದು ಊರಿನ ಗ್ರಾಮಸ್ಥರು ಹಾಗೂ ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದರು. ಅಷ್ಟೆ ಅಲ್ಲದೇ ಈ ಯುವಕರು ಊರಿನ ಯುವತಿಯರಿಗೆ ಹಣ ನೀಡಿ ಬಾ ಅನ್ನೋದು, ಒಂಟಿ ಮಹಿಳೆ ಮನೆಗೆ ನುಗ್ಗೋದು ಮಾಡುತ್ತಿದ್ದರು ಎಂದು ಊರಿನ ಜನ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಇಬ್ಬರ ಮೇಲಿನ ಆರೋಪ ಸಾಬೀತಾಗಿದ್ದು, ಇಬ್ಬರಿಗೂ ಶಿಕ್ಷೆಯಾಗುತ್ತೆಂದು ಊರಿನ ಜನರಿಗೆ ಸಂತೋಷವಾಗಿದೆ.

ಘಟನೆ ಬೆಳಕಿಗೆ ಬರುವ ಮುನ್ನ ಊರಿನ ಜನ ಯುವತಿಗಾಗಿ ಹುಡುಕಾಟದಲ್ಲಿದ್ದರೆ ಈ ಇಬ್ಬರು ಯುವಕರು ಮಾತ್ರ ತಮಗೇನು ಗೊತ್ತಿಲ್ಲದಂತಿದ್ರು. ಘಟನೆ ಬೆಳಕಿಗೆ ಬಂದು ಕೇಸ್ ದಾಖಲಾಗುತ್ತಿದ್ದಂತೆ ಶೃಂಗೇರಿಯ ಅಂದಿನ ಸಬ್ ಇನ್ಸ್‍ಪೆಕ್ಟರ್ ಸುದೀರ್ ಹೆಗ್ಡೆ ಇಬ್ಬರನ್ನು ಬಂಧಿಸಿದ್ದರು. ಮೂರು ವರ್ಷಗಳ ವಿಚಾರಣೆಯ ಬಳಿಕ ಇವರ ತಪ್ಪು ಸಾಬೀತಾಗಿ ಕೇಸ್ ಶಿಕ್ಷೆಯ ಹೊಸ್ತಿಲಿಗೆ ಬಂದು ನಿಂತಿದೆ. ವಿದ್ಯಾರ್ಥಿನಿಯ ಪರವಾಗಿ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಯಳಗೇರಿ ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *