ಮೂಡಬಿದಿರೆಯಲ್ಲಿ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ಚಾಲನೆ

Public TV
1 Min Read

ಮಂಗಳೂರು: ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರ ಜಂಟಿ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ – 2020 ಅದ್ಧೂರಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು.

ಜನವರಿ 6ರವರೆಗೆ ನಡೆಯುವ ಈ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಕ್ರೀಡೆಯನ್ನು ಪಠ್ಯೇತರ ವಿಷಯವನ್ನಾಗಿಸುವ ಬದಲು ಅದನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದರು.

ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಸರ್ಕಾರ ಬಹಳಷ್ಟು ಅವಕಾಶ ನೀಡುತ್ತಿದೆ. ಯುವ ಜನತೆಯನ್ನು ಮತ್ತಷ್ಟು ಉತ್ತೇಜಿಸಿ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆಗಬೇಕು. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ನಾವು ಪದಕ ಗೆಲ್ಲಬೇಕಾಗಿದೆ. ಬಳಿಕ ಪ್ಯಾರಿಸ್, ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಳಲ್ಲೂ ಪದಕ ಜಯಿಸಲು ನಮ್ಮ ದೇಶದ ಕ್ರೀಡಾಪಟುಗಳು ಸೇರಿದಂತೆ ನಾವೆಲ್ಲರೂ ಸಾಕಷ್ಟು ಸಿದ್ಧತೆ ನಡೆಸಬೇಕಿದೆ ಎಂದು ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪಂಥ ಸಂಚಲನ, ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ನೂರಕ್ಕೂ ಅಧಿಕ ಸಾಂಸ್ಕೃತಿಕ ಕಲಾಪ್ರಕಾರಗಳ ಮೆರವಣಿಗೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್ ಸಚ್ಚಿದಾನಂದ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಶಾಸಕ ಉಮನಾಥ್ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ದೇಶದ 306 ವಿಶ್ವವಿದ್ಯಾಲಯಗಳ 4,469 ವಿದ್ಯಾರ್ಥಿಗಳು, 1,000 ಕ್ರೀಡಾಧಿಕಾರಿಗಳು ಭಾಗವಹಿಸಿದ್ದಾರೆ. ಈ ಬಾರಿ ಹೊಸತಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ 42 ಕಿ.ಮೀ ಮ್ಯಾರಥಾನ್ ಈ ಕ್ರೀಡಾಕೂಟಕ್ಕೆ ಸೇರ್ಪಡೆ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *