ವೇಷಧಾರಿಗೆ ಉತ್ತರ ಕರ್ನಾಟಕ ಭಾಷೆಯ ಮೋಹ!

Public TV
1 Min Read

ಉತ್ತರ ಕರ್ನಾಟಕ ಸೀಮೆಯಿಂದ ಕನ್ನಡಯದ ವಿವಿಧ ವಿಭಾಗಗಳಿಗೆ ಪ್ರತಿಭಾವಂತರ ಆಗಮನವಾಗುತ್ತಲೇ ಇರುತ್ತದೆ. ನಿರ್ದೇಶನ, ನಟನೆ ಸೇರಿದಂತೆ ನಾನಾ ಬಗೆಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿವೆ. ಈ ವಾರ ಬಿಡುಗಡೆಯಾಗಲಿರುವ ವೇಷಧಾರಿ ಚಿತ್ರವೂ ಕೂಡಾ ಅಂಥಾದ್ದೇ ಉತ್ತರ ಕರ್ನಾಟಕದ ಘಮಲು ಹೊಂದಿರುವ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿರುವ ಶಿವಾನಂದ್ ಭೂಶಿ ಕೂಡಾ ಉತ್ತರ ಕರ್ನಾಟಕ ಮೂಲದವರೇ. ಈ ಪ್ರೀತಿಯಿಂದಲೇ ಈ ಚಿತ್ರವನ್ನವರು ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಪ್ರಧಾನವಾಗಿ ಬಳಸಿಕೊಂಡು ದೃಷ್ಯ ಕಟ್ಟಿದ್ದಾರೆ.

ಈ ಚಿತ್ರದ ಮೂಲಕವೇ ಆರ್ಯನ್ ನಾಯಕ ನಟನಾಗಿ ಅವತರಿಸಿದ್ದಾರೆ. ಮೊದಲ ಚಿತ್ರದಲ್ಲಿಯೇ ನಾನಾ ಶೇಡುಗಳಿರೋ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಖುಷಿಯಲ್ಲಿರುವ ಆರ್ಯನ್‍ಗೆ ಸೋನಂ ರೈ, ಅಶ್ವಿತಾ ಮತ್ತು ಶೃತಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಬಹುತೇಕ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆಯನ್ನು ನಿರ್ದೇಶಕರು ಹೊಸೆದಿದ್ದಾರೆ. ಅದರ ಸ್ವಾದವೇನೆಂಬುದರ ಸುಳಿವು ಟ್ರೇಲರ್ ಮೂಲಕವೇ ಸಿಕ್ಕಿದೆ. ಕುರಿ ರಂಗ, ವೈಜನಾಥ್ ಬಿರಾದಾರ್ ಮುಂತಾದವರ ಕಾಮಿಡಿ ಝಲಕ್‍ಗಳು ಎಲ್ಲರನ್ನೂ ಸೆಳೆದುಕೊಂಡಿವೆ.

ಉತ್ತರ ಕರ್ನಾಟಕದ ಭಾಷಾ ಸೊಗಡಿಗೆ ತನ್ನದೇ ಆಗಿರುವಂಥಾ ಸೆಳೆತವಿದೆ. ಎಲ್ಲ ಭಾಗದವರಿಗೂ ಆಪ್ತವಾಗುವ ಸ್ವರೂಪದ ಈ ಭಾಷೆಯನ್ನು ಈಗಾಗಲೇ ಹಲವಾರು ಚಿತ್ರಗಳಲ್ಲಿ ಪ್ರಧಾನವಾಗಿಯೇ ಬಳಸಲಾಗಿದೆ. ಅದೇ ನೆಲದಿಂದ ಬಂದಿರುವ ನಿರ್ದೇಶಕ ಶಿವಾನಂದ ಭೂಶಿ ಅವರಂತೂ ಉತ್ತರ ಕರ್ನಾಟಕ ಭಾಷೆಯನ್ನು ತುಂಬಾನೇ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರಂತೆ. ಟ್ರೇಲರ್ ನಲ್ಲಿ ಕಾಮಿಡಿ ಅಂಶಗಳು ಕಾಣಿಸಿಕೊಂಡಿದ್ದರೂ ಗಂಭೀರವಾದ ಕಥಾ ಹಂದರವೇ ಈ ಸಿನಿಮಾದಲ್ಲಿದೆ. ಯಾವ ಹಂತದಲ್ಲಿಯೂ ಮನೋರಂಜನೆ ತುಸುವೂ ಕಡಿಮೆಯಾಗದಂತೆ ಎಚ್ಚರ ವಹಿಸಿಯೇ ಚಿತ್ರತಂಡ ಈ ಸಿನಿಮಾವನ್ನು ರೂಪಿಸಿದೆಯಂತೆ. ಅದೆಲ್ಲವೂ ಈ ವಾರ ನಿಮ್ಮೆಲ್ಲರ ಮುಂದೆ ತೆರೆದುಕೊಳ್ಳಲಿದೆ.


Share This Article
Leave a Comment

Leave a Reply

Your email address will not be published. Required fields are marked *