ನ್ಯೂ ಇಯರ್ ನೆಪದಲ್ಲಿ ಅನೈತಿಕ ಚಟುವಟಿಕೆ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ

Public TV
1 Min Read

ಹುಬ್ಬಳ್ಳಿ: ಹೊಸ ವರ್ಷಾಚರಣೆ ಹೆಸರಲ್ಲಿ ಅನೈತಿಕ ವರ್ತನೆ ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಹೊಸ ವರ್ಷವನ್ನು ಸಂತೋಷದಿಂದ ಆಚರಣೆ ಮಾಡುವ ಮೂಲಕ ಯಾವುದೇ ಅವಘಡ ಸಂಭವಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಸಂಘಟನೆಗಳ ಹೆಸರಲ್ಲಿ ಸಾರ್ವಜನಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರದ ಎಲ್ಲ ಹೋಟೆಲ್ ಹಾಗೂ ರೆಸ್ಟೋರೆಂಟುಗಳಿಗೂ ಮಾಹಿತಿ ನೀಡಲಾಗಿದ್ದು, ಬೌನ್ಸರ್ ಹಾಗೂ ನೈಟ್ ವಿಷನ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸೂಚಿಸಲಾಗಿದೆ. ಗಾಂಜಾ ಅಫೀಮು ಹಾಗೂ ಇತರ ಮಾದಕ ವಸ್ತುಗಳ ಸೇವನೆ ಅವಕಾಶ ನೀಡಿದರೆ ಅಂತಹ ಹೋಟೆಲ್ ಹಾಗೂ ರೆಸ್ಟೋರೆಂಟ್ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಅವಘಡ ಸಂಭವಿಸಿದರೂ ಪೊಲೀಸರಿಗೆ ಮಾಹಿತಿ ನೀಡಬೇಕು. ಹೆಸರು ಕೆಡುತ್ತದೆ ಎಂದು ಹೋಟೆಲ್ ಹಾಗೂ ರೆಸ್ಟೋರೆಂಟುಗಳು ಘಟನೆ ಮರೆಮಾಚಲು ಪ್ರಯತ್ನಿಸಬಾರದು ಎಂದು ಸೂಚನೆ ನೀಡಿದರು.

ಹೊಸ ವರ್ಷ ಹರ್ಷದಿಂದ ಕೂಡಿರಲಿ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಬೇಡಿ. ಅಲ್ಲದೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಬಾರದು. ಬಾರ್ ಮತ್ತು ರೆಸ್ಟೋರೆಂಟುಗಳು ಸ್ಪೇರ್ ಆ್ಯಂಡ್ ಕ್ಯಾಬ್ ವ್ಯವಸ್ಥೆ ಮಾಡುವ ಮೂಲಕ ಕುಡಿದ ಅಮಲಿನಲ್ಲಿರುವ ಗ್ರಾಹಕರನ್ನು ಮನೆಗೆ ಕಳುಹಿಸುವ ಕಾರ್ಯ ಮಾಡಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಹೊಸ ವರ್ಷದ ಆಚರಣೆಯನ್ನು ಸಂತೋಷದಿಂದ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *