ಹಿ ಇಸ್ ನಥಿಂಗ್ ಬಟ್ ಹಿಟ್ಲರ್, ದೇಶವನ್ನ ಉದ್ಧಾರ ಮಾಡಲು ಬಂದಿರುವ ಪ್ರಧಾನಿ ಮೋದಿಯಲ್ಲ: ಎಚ್‍ಡಿಕೆ

Public TV
2 Min Read

ರಾಮನಗರ: ಅಡಾಲ್ಫ್ ಹಿಟ್ಲರ್ ನ ಮಾತು ಕೇಳಿದ್ದೀರಾ, ಅಂದು ಹಿಟ್ಲರ್ ಹೇಳಿದ್ದ ಮಾತುಗಳನ್ನೇ ರಾಮ್‍ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಹಿ ಇಸ್ ನಥಿಂಗ್ ಬಟ್ ಹಿಟ್ಲರ್, ದೇಶವನ್ನು ಉದ್ಧಾರ ಮಾಡಲಿಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಕೇಂದ್ರದಲ್ಲಿ ಮೆಜಾರಿಟಿ ಇದೆ ಎಂದು ಅವರು ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಯವರು ರಾಮನಗರದಲ್ಲಿ ತಿಳಿಸಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಆಗಮಿಸಿದ್ದ ಅವರು ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಈ ಹಿಂದೆಯೇ ವಾಜಪೇಯಿರವರು 2003ರಲ್ಲಿ ಆಡಳಿತ ನಡೆಸುವ ವೇಳೆ ಬಿಲ್‍ವೊಂದನ್ನು ತಂದಿದ್ದರು. ಅದರ ಮುಂದುವರಿದ ಭಾಗವಾಗಿ ಇದೀಗ ಎನ್‍ಆರ್ ಸಿ, ಸಿಎಎ, ಸಿಎಬಿ ತರುತ್ತಿದ್ದಾರೆ.

ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಈ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂ ಸಮಾಜದವರು ಕೇಕೆ ಹಾಕಿ ನಗುವುದಲ್ಲ, ಮುಂದಿನ ದಿನ ನಿಮ್ಮ ಮನೆ ಮುಂದೆಯೂ ಮೋದಿ, ಅಮಿತ್ ಶಾ ಬರ್ತಾರೆ ಎಂದು ತಿಳಿಸಿದರು. ವಂಶಾವಳಿ, ಗುರುತು, ಪೂರ್ವಿಕರ ಮಾಹಿತಿಯನ್ನು ನಾನು ಕೊಡಬೇಕು ನಮ್ಮಪ್ಪನೂ ಕೊಡಬೇಕು, ಎಲ್ಲರೂ ಕೊಡಬೇಕಾಗುತ್ತೆ. ಆದರೆ ಎರಡ್ಮೂರು ತಲೆ ಮಾರಿನ ಮಾಹಿತಿ ಎಲ್ಲಿಂದ ತರುವುದು, ಎಲ್ಲಿಂದ ಅವರಿಗೆ ಕೊಡ್ತೀರಿ ಎಂದು ಪ್ರಶ್ನಿಸಿದರು.

ಈ ಹಿಂದೆ ಜರ್ಮನಿಯ ಅಡಾಲ್ಫ್ ಹಿಟ್ಲರ್ ಯಾವ ರೀತಿ ಅಧಿಕಾರ ನಡೆಸುತ್ತಾ ಮಾತನಾಡುತ್ತಿದ್ದನೋ ಅದೇ ರೀತಿ ರಾಮ್ ಲೀಲಾ ಮೈದಾನದಲ್ಲಿ ಅದೇ ಹಿಟ್ಲರ್ ನ  ಮಾತುಗಳನ್ನು ಮೋದಿ ಪುನರುಚ್ಚರಿಸಿದ್ದಾರೆ ಎಂದು ತಿಳಿಸಿದರು.

ಮಂಗಳೂರು ಗಲಭೆಯಲ್ಲಿ ಸತ್ತವರ ಕುಟುಂಬಕ್ಕೆ ಯಾಕೆ 10 ಲಕ್ಷ ಪರಿಹಾರ ಹೇಳಿದ್ರಿ ಸಿಎಂ ರವರೇ. ಅವರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಪೊಲೀಸರ ವಿರುದ್ಧ ಹಲ್ಲೆ ಮಾಡಲು ಹೋದವರು ನಮಗೆ ಖಚಿತ ಮಾಹಿತಿ ಇದೆ ಎಂದು ಹೇಳುತ್ತೀರಿ. ಪರಿಹಾರವನ್ನು ಯಾಕೆ ಕೊಟ್ರಿ ಜೀವದ ಜೊತೆ ಚೆಲ್ಲಾಟವಾಡಲಿಕ್ಕೆ ಸರ್ಕಾರ ನಡೆಸ್ತಿದ್ದೀರಾ ಎಂದು ಪ್ರಶ್ನಿಸಿದರು. ಗಲಭೆ ವಿಚಾರವಾಗಿ 10 ನಿಮಿಷದಲ್ಲಿ ಕಾಟಾಚಾರದ ಮೀಟಿಂಗ್ ಮಾಡ್ತೀರಿ. ರಾಜ್ಯದ ಸಿಎಂ ಆಗಿರುವ ನೀವು ಒಂದು ಸಮಾಜದ ಸಿಎಂ ಅಲ್ಲ ನೀವು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *