ಮುಖ್ಯೋಪಾಧ್ಯಾಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಪ್ರತಿಭಾವಂತ ವಿದ್ಯಾರ್ಥಿನಿಯರು

Public TV
2 Min Read

– ಅಪಘಾತವಾಗಿ ನಾಲ್ಕು ತಿಂಗಳಾದರೂ ಗುಣಮುಖರಾಗುತ್ತಿಲ್ಲ
– ಆಸ್ಪತ್ರೆ ಖರ್ಚಿಗೂ ಹಣವಿಲ್ಲದೆ ಬಡ ವಿದ್ಯಾರ್ಥಿನಿಯರ ನರಳಾಟ

ರಾಯಚೂರು: ಸಿರವಾರದ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲಾ ಮುಖ್ಯೋಪಾಧ್ಯಾಯರ ಎಡವಟ್ಟಿನಿಂದ ಅಪಘಾತಕ್ಕೊಳಗಾದ ವಿದ್ಯಾರ್ಥಿನಿಯರ ಬದುಕು ನಾಲ್ಕು ತಿಂಗಳು ಕಳೆದರೂ ಸರಿಹೋಗಿಲ್ಲ.

ಆಗಸ್ಟ್ 29ರಂದು ವಸತಿ ಶಾಲೆ ವಿದ್ಯಾರ್ಥಿನಿಯರು ವಲಯ ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಕುರುಕುಂದಾ ಗ್ರಾಮಕ್ಕೆ ತೆರಳಿದ್ದರು. ಮರಳಿ ಬರುವಾಗ 35 ವಿದ್ಯಾರ್ಥಿನಿಯರಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿತ್ತು. 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯಗಳಾಗಿ, ಮೂವರ ಸ್ಥಿತಿ ಗಂಭೀರವಾಗಿತ್ತು. ಚಾಮುಂಡಿ, ದೀಪಾ ಹಾಗೂ ಸುನಿತಾ ವಿದ್ಯಾರ್ಥಿನಿಯರು ಇನ್ನೂ ಚೇತರಿಸಿಕೊಂಡಿಲ್ಲ. ಚಾಮುಂಡಿ ತನ್ನ ಒಂದು ಕೈಯನ್ನೇ ಅಪಘಾತದಲ್ಲಿ ಕಳೆದುಕೊಂಡಿದ್ದಾಳೆ.

ಬಡ ಕುಟುಂಬದ ಈ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಇತ್ತ ಶಾಲೆಗೂ ಹೋಗದೇ ಗುಣಮುಖರೂ ಆಗದೆ ವಿದ್ಯಾರ್ಥಿನಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಮೊದಲಿಗೆ ಚಿಕಿತ್ಸೆ ವೆಚ್ಚ ಭರಿಸಿದೆಯಾದರೂ ಈಗ ಈ ವಿದ್ಯಾರ್ಥಿನಿಯರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇವರ ನೋವಿಗೆ ಸ್ಪಂದಿಸಬೇಕಿರುವ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಈಗ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿವೆ.

ಕ್ರೀಡಾಕೂಟದಲ್ಲಿ ಬಹುಮಾನಗಳನ್ನ ಗೆದ್ದು ಖಷಿಯಾಗಿ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕುರಿಗಳ ಹಾಗೇ ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಬರುವಾಗ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಹೊಡೆದಿತ್ತು. ಈ ಅಪಘಾತಕ್ಕೆ ಶಾಲೆಯ ಮುಖ್ಯೋಪಾಧ್ಯಾಯರೇ ಕಾರಣ, ಅವರು ಸರಿಯಾಗಿ ಮಕ್ಕಳಿಗೆ ಕ್ರೀಡಾಕೂಟದಿಂದ ಬರಲು ವಾಹನ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಬಿಟ್ಟು ಚಿಕ್ಕ ಟಾಟಾ ಏಸ್ ವಾಹನದಲ್ಲಿ ಅವರನ್ನು ಕರೆಕೊಂಡು ಬರಬಾರದಿತ್ತು. ಈಗ ಮುಖ್ಯೋಪಾಧ್ಯಾಯರ ಎಡವಟ್ಟಿಗೆ ವಿದ್ಯಾರ್ಥಿನಿಯರ ಜೀವನ ಕಷ್ಟದಲ್ಲಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ವಾಲಿಬಾಲ್ ಆಟದಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರತಿಭೆ ತೋರಿದ್ದ ಚಾಮುಂಡಿ ತನ್ನ ಕೈಯನ್ನೇ ಕಳೆದುಕೊಂಡಿದ್ದಾಳೆ. ಇನ್ನಿಬ್ಬರು ವಿದ್ಯಾರ್ಥಿನಿಯರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರಕದೆ ಗಾಯವಾಗಿದ್ದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ಘಟನೆ ನಡೆದು ನಾಲ್ಕು ತಿಂಗಳಾದರೂ ವಿದ್ಯಾರ್ಥಿನಿಯರು ಚೇತರಿಸಿಕೊಂಡಿಲ್ಲ.

ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ. ಆದರೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ವಿದ್ಯಾರ್ಥಿನಿಯರ ಮುಂದಿನ ಚಿಕಿತ್ಸೆ ಹಾಗೂ ಅವರ ಶಿಕ್ಷಣದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *