ಮಹದಾಯಿ ಹೋರಾಟ ಆರಂಭ ಮಾಡಿದ್ದೇ ಬಿಜೆಪಿ: ಸಿ.ಸಿ ಪಾಟೀಲ್

Public TV
1 Min Read

ಧಾರವಾಡ: ಮಹದಾಯಿ ವಿಷಯದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯವಾಗದು. ಮಹದಾಯಿ ಹೋರಾಟ ಆರಂಭಿಸಿದ್ದೇ ಬಿಜೆಪಿ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹದಾಯಿ ಹೋರಾಟ ಪ್ರಾರಂಭ ಮಾಡಿದವರೇ ಬಿಜೆಪಿಯವರು. ಜಂತರ್-ಮಂತರ್ ಎದುರು ಮೊದಲು ನಾವೇ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಇತ್ತೀಚೆಗೆ ಪ್ರಕಾಶ್ ಜಾವ್ಡೇಕರ್ ಕರ್ನಾಟಕಕ್ಕೆ ಶೀಘ್ರವೇ ಸಿಹಿ ಸುದ್ದಿ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಸಚಿವರ ಮಾತಿನಲ್ಲಿ ನಮಗೆ ವಿಶ್ವಾಸ ಇದೆ. ಕೇಂದ್ರ ಸಚಿವರೊಂದಿಗೆ ಬಸವರಾಜ್ ಬೊಮ್ಮಾಯಿ ಅವರಿಗೆ ಚರ್ಚೆ ಮಾಡುವಂತೆ ಈಗಾಗಲೇ ಸಿಎಂ ಹೇಳಿದ್ದಾರೆ. ಅದರಂತೆ ಬೊಮ್ಮಾಯಿಯವರು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಕೇಂದ್ರದಿಂದ ಮಹದಾಯಿ ಹೋರಾಟಗಾರರಿಗೆ ಮತ್ತು ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗದು ಎಂದು ಹೇಳಿದರು. ಈ ಸಂಬಂಧಿತ ಪ್ರಶ್ನೆಗಳಿಗೆ ನಾನೇನೂ ಹೆಚ್ಚಿಗೆ ಮಾತನಾಡುವುದಿಲ್ಲ, ಆದರೆ ಜಾವ್ಡೇಕರ್ ಅವರ ಮಾತಿನ ಮೇಲೆ ವಿಶ್ವಾಸ ಇದೆ ಅಂತ ಮಾತ್ರ ಹೇಳಬಲ್ಲೆ ಎಂದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲವರ ಖಾತೆಗಳನ್ನು ವಾಪಸ್ ಪಡೆಯಲಾಗುತ್ತದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಖಾತೆ ಹಂಚಿಕೆ ಸಿಎಂ ಪರಮಾಧಿಕಾರ. ಈಗಾಗಲೇ ನಮಗಿರುವ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಒಂದೊಂದು ಖಾತೆ ಕೊಟ್ಟಿದ್ದಾರೆ. ಎಲ್ಲರಲ್ಲಿಯೂ ಹೆಚ್ಚುವರಿ ಖಾತೆಗಳಿವೆ. ನನಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಜೊತೆಗೆ ಅರಣ್ಯ ಮತ್ತು ಪರಿಸರ ಖಾತೆ ಕೊಟ್ಟಿದ್ದಾರೆ. ಈಗ ಯಾವ ಖಾತೆ ಯಾರಿಗೆ ಕೊಡಬೇಕು? ಯಾರಿಗೆ ಬಿಡಬೇಕು ಎನ್ನುವುದು ಸಿಎಂ ಪರಮಾಧಿಕಾರ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *