ಹೌದು ಹುಲಿಯಾ ಎಂದಾಕ್ಷಣ ಹುಲಿ ಪ್ರತ್ಯಕ್ಷ – ಬೆಚ್ಚಿಬಿದ್ದ ಜಿಂಕೆ, ರೈತ

Public TV
2 Min Read

ಬೆಳಗಾವಿ: ಮೊಬೈಲ್‍ನಲ್ಲಿ ರೈತರೊಬ್ಬರು ಹೌದು ಹುಲಿಯಾ ಡೈಲಾಗ್ ಕೇಳುವಾಗಲೇ ಹುಲಿ ಪ್ರತ್ಯಕ್ಷವಾಗಿ, ಗದ್ದೆಯಲ್ಲಿ ಮೇಯುತ್ತಿದ್ದ ಎತ್ತಿನ ಮೇಲೆ ದಾಳಿ ನಡೆಸಿ ತಿಂದು ಹಾಕಿದ ಘಟನೆ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ.

ಉಪಚುನಾವಣೆ ಪ್ರಚಾರದಲ್ಲಿ ಕೇಳಿಬಂದ ಹೌದು ಹುಲಿಯಾ ಡೈಲಾಗ್ ಫುಲ್ ವೈರಲ್ ಆಗಿದ್ದು, ಈ ಡೈಲಾಗ್ ಕರ್ನಾಟಕ ತುಂಬೆಲ್ಲಾ ಹರಿದಾಡುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪೂರ ಗ್ರಾಮದ ಕೂಲಿ ಕಾರ್ಮಿಕ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಹೌದು ಹುಲಿಯಾ ಎಂದು ಫೇಮಸ್ ಆಗಿದ್ದಾನೆ. ಇದನ್ನೆ ಮೊಬೈಲ್‍ನಲ್ಲಿ ವೀಕ್ಷಣೆ ಮಾಡುತ್ತ ಕುಳಿತಿದ್ದ ಖಾನಾಪುರ ತಾಲೂಕಿನ ಕೊಂಗಳಾ ಗ್ರಾಮದ ರೈತ ಶೆಟ್ಟಪ್ಪಾ ಗಡಕರಿಗೆ ಶಾಕ್ ಆಗಿದೆ. ಹೌದು ಹುಲಿಯಾ ಎಂಬ ಡೈಲಾಗ್ ಕೇಳುವಾಗ ಹುಲಿಯೊಂದು ಪ್ರತ್ಯಕ್ಷವಾಗಿ ಗದ್ದೆಯಲ್ಲಿ ಮೇಯುತ್ತಿದ್ದ ರೈತನ ಎತ್ತಿನ ಮೇಲೆ ದಾಳಿ ಮಾಡಿ ತಿಂದು ಹಾಕಿದೆ.

ಮಹದಾನಿ ನದಿ ತೀರದ ಬಳಿ ಎತ್ತಿನ ಕಳೆಬರಹ ಪತ್ತೆಯಾಗಿದೆ. ಎತ್ತಿನ ಮುಕ್ಕಾಲು ದೇಹವನ್ನು ಹುಲಿ ತಿಂದು ಹಾಕಿದ್ದು, ಎತ್ತಿನ ಒಂದು ಕಾಲು ಹಾಗೂ ತಲೆ ಮಾತ್ರ ಪತ್ತೆಯಾಗಿದೆ. ಈ ಖಾನಾಪುರ ಅರಣ್ಯ ಇಲಾಖೆಗೆ ರೈತ ದೂರು ನೀಡಿದ್ದು, ಸ್ಥಳ ಪರಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಹುಲಿ ದಾಳಿಯನ್ನು ಖಚಿತ ಪಡಿಸಿದ್ದಾರೆ. ಭೀಮಗಡ ಅರಣ್ಯದಲ್ಲಿ ಹುಲಿಗಳಿದ್ದು, ಈ ಕೊಂಗಳಾ ಗ್ರಾಮ ಕೂಡ ಈ ಪ್ರದೇಶದಲ್ಲಿದೆ. ಹೀಗಾಗಿ ಆಹಾರ ಅರಸಿ ಹುಲಿಗಳು ಗ್ರಾಮಕ್ಕೆ ನುಗ್ಗಿದೆ ಎಂದು ಸಿಬ್ಬಂದಿ ತಿಳಿಸಿದರು.

ಇನ್ನೊಂದೆಡೆ ಹುಲಿಯ ಆರ್ಭಟಕ್ಕೆ ಬೆಚ್ಚಿಬಿದ್ದ ಜಿಂಕೆಯೊಂದು ಕಾಡಿನಿಂದ ಓಡಿ ಬಂದು ನಗರ ಸೇರಿದೆ. ಕಾಡಿನಲ್ಲಿ ಹುಲಿ ಕಂಡರೆ ಬಹುತೇಕ ಎಲ್ಲಾ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿ ಹೋಗುತ್ತವೆ. ಅದರಲ್ಲೂ ಜಿಂಕೆ ಮಾಂಸ ಎಂದರೆ ಹುಲಿಗೆ ಅಚ್ಚುಮೆಚ್ಚು. ಕಾಡಿನಲ್ಲಿ ಹುಲಿ ಕಂಡ ತಕ್ಷಣ ಕೆಲವು ಜಿಂಕೆಗಳು ಓಡಿ ಹೋಗಿದ್ದು, ಆ ಗುಂಪಿನಲ್ಲಿದ್ದ ಒಂದು ಜಿಂಕೆ ದಿಕ್ಕು ತಪ್ಪಿಸಿಕೊಂಡು ಖಾನಾಪುರ ನಗರಕ್ಕೆ ಬಂದಿದೆ.

ಇಳಿ ಸಂಜೆಯಲ್ಲಿ ಖಾನಾಪುರ ನಗರಕ್ಕೆ ಆಗಮಿಸಿದ ಜಿಂಕೆಯನ್ನು ಬೀದಿನಾಯಿಗಳು ಅಟ್ಟಾಡಿಸಿಕೊಂಡು ಗಾಯಗೊಳಿಸಿವೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಯ ಪಶು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಶು ವೈದ್ಯಾಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿ ಅಲ್ಲಿಯೇ ಆಶ್ರಯ ನೀಡಿದ್ದಾರೆ. ಖಾನಾಪೂರ ತಾಲೂಕಿನ ಗುಂಜಿ ಅರಣ್ಯ ಭಾಗದಿಂದ ಈ ಜಿಂಕೆ ಬಂದಿದೆ ಎಂದು ಪ್ರಥಮ ಮಾಹಿತಿಯನ್ನು ಅರಣ್ಯ ಇಲಾಖೆ ಕಲೆಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *