ಕವಿವಿ ಹಸಿರುಹಾಸಿನ ಮೇಲೆ ಸರ್ಕಾರಿ ನೌಕರಿ ಕನಸು ಹೊತ್ತವರಿಗೆ ‘ಜ್ಞಾನದಾಸೋಹ’

Public TV
1 Min Read

ಧಾರವಾಡ: ಸರ್ಕಾರಿ ಉದ್ಯೋಗ ಪಡೆಯಬೇಕೆಂದು ಓದುತ್ತಿರುವ ಅಭ್ಯರ್ಥಿಗಳಿಗೆ ಧಾರವಾಡ ಕವಿವಿ ಆವರಣದ ಹಸಿರುಹಾಸಿನ ಮೇಲೆ ಉಚಿತ ತರಬೇತಿ ನೀಡಲಾಗುತ್ತಿದೆ. ತಾನು ಕಲಿಯಯಲು ಕಷ್ಟ ಪಟ್ಟದ್ದನ್ನ ಇನ್ನೊಬ್ಬರು ಪಡಬಾರದು ಎಂದು, ವಿದ್ಯಾರ್ಥಿಗಳಿಗೆ ಫ್ರೀ ಕೊಚಿಂಗ್ ಕೊಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಅನಿಲ್ ರಜಪೂತ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ವಿದ್ಯಾನಗರಿ ಧಾರವಾಡದ ಕರ್ನಾಟಕ ವಿವಿ ಆವರಣದಲ್ಲಿರುವ ಗಾರ್ಡನ್ ಲೈಬ್ರರಿಯಲ್ಲಿ ಆಸಕ್ತ ವಿದ್ಯಾರ್ಥಿಗಳು ಇಲ್ಲಿ ಉಚಿತ ತರಬೇತಿ ಪಡೆಯುತ್ತಿದ್ದಾರೆ. ಈ ಗಾರ್ಡನ್ ನಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ವ್ಯಾಸಂಗ ಮಾಡುತ್ತಿರೋದರಿಂದ ಇದನ್ನು ಗಾರ್ಡನ್ ಲೈಬ್ರರಿ ಎಂದು ಕರೆಯಲಾಗುತ್ತದೆ. ಈ ಗಾರ್ಡನ್ ನ ಒಂದು ಮೂಲೆಯಲ್ಲಿ ಅನಿಲ್ ರಜಪೂತ ವಿಶ್ವವಿದ್ಯಾಲಯದ ಅನುಮತಿ ಪಡೆದು ತರಬೇತಿಯನ್ನು ಆರಂಭಿಸಿದ್ದಾರೆ.

ಉತ್ತರ ಕರ್ನಾಟಕದ ಹಲವು ಭಾಗಗಳಿಂದ ಸರ್ಕಾರಿ ಉದ್ಯೋಗದ ಕನಸು ಹೊತ್ತು ಧಾರವಾಡಕ್ಕೆ ಬರೋ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ ಕ್ಲಾಸ್‍ಗೆ ಹೋಗಲು ಹಣ ಇರಲ್ಲ. ಇಂಥವರನ್ನು ಗಮನದಲ್ಲಿಟ್ಟುಕೊಂಡು ಅನಿಲ್ ರಜಪೂತ್ ವಿವಿ ಸಹಕಾರದಲ್ಲಿ 9 ತಿಂಗಳ ಹಿಂದೆ ಹಸಿರುಹಾಸಿನ ಮೇಲೆ ಫ್ರೀ ಕೋಚಿಂಗ್ ಕ್ಲಾಸ್ ಆರಂಭಿಸಿದ್ದಾರೆ. ಇಲ್ಲಿಗೆ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾರೆ.

ಕೋಚಿಂಗ್ ಪಡೆದವರಲ್ಲಿ ಕೆಲವರು ಕೆಎಎಸ್, ಪಿಎಸ್‍ಐ, ಎಸ್‍ಡಿಸಿ, ಎಫ್‍ಡಿಸಿ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾರೆ. ಇನ್ನೂ ಕೆಲವರ ಫಲಿತಾಂಶ ಕೂಡಾ ಬರಬೇಕಿದೆ. ಫ್ರೀ ಕೊಚಿಂಗ್ ಪಡೆಯುವ ವಿದ್ಯಾರ್ಥಿಗಳು, ಪರೀಕ್ಷೆಗೆ ಮಾತ್ರ 5 ರೂಪಾಯಿ ಕೊಡಬೇಕು. ಇಲ್ಲಿ ಕಲಿತು ನೌಕರಿ ಪಡೆದವರು ಇದೀಗ ಅನಿಲ್ ಅವರಿಗೆ ಕೋಚಿಂಗ್‍ನಲ್ಲಿ ಸಾಥ್ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *