ಬೆಂಗಳೂರು: ಬರೋಬ್ಬರಿ ನೂರಕ್ಕೂ ಹೆಚ್ಚು ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ದಂಪತಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮಂಜುಳಾ, ದೇವರಾಜ್ ಬಂಧಿತ ಖತರ್ನಾಕ್ ದಂಪತಿ. ಮೂಲತಃ ಮೈಸೂರಿವರಾದ ದಂಪತಿ ಬೆಂಗಳೂರಿನಲ್ಲಿದ್ದುಕೊಂಡು ಕಳ್ಳತನ ಮಾಡುತ್ತಿದ್ದರು.
ಆರೋಪಿಗಳು ಚಿನ್ನಾಭರಣ ಮಳಿಗೆಯಿಂದ ಹೊರಬರುವ ವೃದ್ಧ ದಂಪತಿಯನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಮಂಜುಳಾ ಚಿನ್ನಾಭರಣದೊಂದಿಗೆ ಬರುವ ವೃದ್ಧ ಮಹಿಳೆಯರಲ್ಲಿ ಮುಂದೆ ಕಳ್ಳರಿದ್ದಾರೆ ಎಚ್ಚರವಾಗಿರಿ ಎಂದು ಹೇಳುತ್ತಿದ್ದಳು. ನಂತರ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿಗೆ ತನ್ನ ಗಂಡನನ್ನು ಕರೆಸಿಕೊಂಡು ಚಿನ್ನಾಭರಣ ದೋಚಿಕೊಂಡು ಅಲ್ಲಿಂದ ಎಸ್ಕೆಪ್ ಆಗುತ್ತಿದ್ದರು.
ಇದೇ ರೀತಿ ದಂಪತಿ ಬರೋಬ್ಬರಿ ನೂರಕ್ಕೂ ಹೆಚ್ಚು ಪ್ರಕರಣಗಳನ್ನ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಸದ್ಯ ಕೋಣನಕುಂಟೆ ಪೊಲೀಸರು ಬಂಧಿತ ಕಳ್ಳ ದಂಪತಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.