ಧಗಧಗ ಉರಿಯೋ ದೊಂದಿ ಬೆಳಕಲ್ಲಿ ಭರತನಾಟ್ಯ- ಹೊಸ ಪ್ರಯೋಗಕ್ಕೆ ಸಾಕ್ಷಿಯಾಯ್ತು ಉಡುಪಿ

Public TV
2 Min Read

ಉಡುಪಿ: ಎಲ್ಲಾ ಕ್ಷೇತ್ರಗಳಲ್ಲೂ ಪ್ರಯೋಗಗಳ ನಡೆಯುತ್ತವೆ. ಹಲವಾರು ಬದಲಾವಣೆಗಳು ಆಗುತ್ತದೆ. ಹಾಗೆಯೇ ಉಡುಪಿಯ ಕುದುಕೊಳ್ಳಿಯಲ್ಲಿ ದೊಂದಿ ಬೆಳಕಲ್ಲಿ ಪ್ರಪ್ರಥಮ ಬಾರಿಗೆ ಭರತನಾಟ್ಯ ಪ್ರದರ್ಶನವಾಯ್ತು.

ಸುಂದರ ಸಂಜೆ ಸೂರ್ಯ ಮುಳುಗಿ ಕತ್ತಲು ಆವರಿಸುತ್ತಲೇ ಕಾಡಿನ ಮಧ್ಯೆ ಬೆಳಕು ಮೂಡಿದೆ. ನೃತ್ಯಗಾರ್ತಿಯರು ಕಾಲಿಗೆ ಗೆಜ್ಜೆಕಟ್ಟಿ ಈಗಾಗಲೇ ನಾಟ್ಯಕ್ಕೆ ಸಿದ್ಧರಾಗಿದ್ದರು. ಆದರೆ ಬೆಳಕಿಲ್ಲ, ಸುತ್ತಲೂ ದೀಪ ಹಚ್ಚಿ ಕತ್ತಲು ಓಡಿಸೋ ಕೆಲಸದಲ್ಲಿ ತಲ್ಲೀನರಾಗಿದ್ದರು. ಮಹಾಲಿಂಗೇಶ್ವರ ದೇವರಿಗೆ ದಿನದ ಮಹಾಮಂಗಳಾರತಿ ಆದ ಕೂಡಲೇ ಭರತನಾಟ್ಯ ಶುರುವಾಯ್ತು.

ಸಾಂಸ್ಕೃತಿಕ ನಗರಿ, ದೇವಾಲಯಗಳ ಊರು ಉಡುಪಿಯಲ್ಲಿ ನಡೆದ ವಿಭಿನ್ನ ಭರತನಾಟ್ಯದ ಚಿತ್ರಗಳಿವು. ದೊಡ್ಡ ವೇದಿಕೆಗಳು, ಅಚ್ಚುಕಟ್ಟಾದ ಪ್ರೇಕ್ಷಕರ ನಡುವೆ ನಡೆಯುವ ಭರತನಾಟ್ಯವನ್ನು ಪ್ರಾಕೃತಿಕ ವೇದಿಕೆಗೆ ಇಳಿಸಲಾಗಿತ್ತು. ಉಡುಪಿ ಹೊರವಲಯದಲ್ಲಿರುವ ದೊಡ್ಡಣಗುಡ್ಡೆಯ ಕುದುಕೊಳ್ಳಿ ಮಹಾಲಿಂಗೇಶ್ವರ ದೇವಸ್ಥಾನ ವಿಭಿನ್ನ ಕಾರ್ಯಕ್ರಮಕ್ಕೆ ಅಂಗಳವಾಯ್ತು. ಇದೇ ಮೊತ್ತ ಮೊದಲ ಬಾರಿಗೆ ದೊಂದಿ ಬೆಳಕಿನಲ್ಲಿ ಶಾಸ್ತ್ರೀಯ ನೃತ್ಯ ಆಯೋಜನೆಯಾಗಿದೆ. ಕೊಡವೂರಿನ ನೃತ್ಯ ನಿಕೇತನ ತಂಡದ ಕಲಾವಿದರು ಭರತನಾಟ್ಯದಲ್ಲಿ ಹೊಸ ಪ್ರಯೋಗ ಮಾಡಿದರು.

ಕಲಾವಿದೆಯರಾದ ಅನಘ ಮತ್ತು ಸಾಧನ ಮಾತನಾಡಿ, ದೊಂದಿಯ ಬೆಳಕಲ್ಲಿ ನೃತ್ಯ ಮಾಡಿದ್ದು ನಮಗಿದು ಪ್ರಥಮ ಅನುಭವ. ಕಡಿಮೆ ಬೆಳಕಲ್ಲಿ ಭರತನಾಟ್ಯದ ಮುದ್ರೆಗಳು ಮುಖಭಾವ ಪ್ರೇಕ್ಷಕರಿಗೆ ತೋರುತ್ತಾ ಎಂಬ ಆತಂಕ ಇತ್ತು. ಆದ್ರೆ ಜನ ಈ ಪ್ರಯೋಗವನ್ನು ಮೆಚ್ಚಿದ್ದಾರೆ. ನಮಗೂ ಖುಷಿಯಾಗಿದೆ ಎಂದರು. ಚೈತನ್ಯ ಮಾತನಾಡಿ, ಸುಧೀರ್ – ಮಾನಸಿ ಮೇಡಂ ಶಿಷ್ಯೆಯಂದಿರು ಅನ್ನೋದಕ್ಕೆ ಖುಷಿಯಾಗುತ್ತದೆ. ಕಾಡಿನ ನಡುವೆ ನಾವೆಂದೂ ನಾಟ್ಯ ಮಾಡಿಲ್ಲ. ಇಲ್ಲಿಯ ವಾತಾವರಣ, ಕಾಡಿನ ಮೌನ ನಮ್ಮನ್ನು ಬೇರೆಯೇ ಒಂದು ಲೋಕಕ್ಕೆ ಕೊಂಡೊಯ್ದಿದೆ ಎಂದರು.

ಪ್ರೇಕ್ಷಕರು ಕೂತಲ್ಲೆಲ್ಲಾ ಬರೀ ಕತ್ತಲಿತ್ತು. ರಂಗದ ಮಂಭಾಗದಲ್ಲಿ ಕಾಡಿನ ಮಧ್ಯೆ, ಗಿಡ ಗಂಟಿ ನಡುವೆ ಎಲ್ಲಿ ನೋಡಿದ್ರೂ ಸಾಂಪ್ರದಾಯಿಕ ದೀಪಗಳನ್ನು ಹಚ್ಚಲಾಗಿತ್ತು. ವೇದಿಕೆ ಸುತ್ತ ಧಗ ಧಗ ಉರಿಯೋ ದೊಂದಿಯನ್ನು ಕಟ್ಟಲಾಗಿತ್ತು. ಕಲಾವಿದ ಪ್ರಶಾಂತ್ ಉದ್ಯಾವರ ವೇದಿಕೆ ಪಕ್ಕ ಶಿವನ ಆರ್ಟ್ ಮಾಡಿ ಅದರಲ್ಲೆಲ್ಲಾ ದೀಪ ಹಚ್ಚಿ ಬೆಳಕು ಹೆಚ್ಚಿಸಿ ಪ್ರದರ್ಶನಕ್ಕೆ ಸಹಕಾರ ನೀಡಿದರು. ದೀಪದ ಬೆಳಕಲ್ಲಿ ಸುಮಾರು ಎರಡು ಗಂಟೆ ನಿರಂತರ ಭರತನಾಟ್ಯ ನಡೆಯಿತು. 25ಕ್ಕೂ ಹೆಚ್ಚು ಯುವತಿಯರು ಸಾಂಪ್ರದಾಯಿಕ ಬೆಳಕಲ್ಲಿ ಕುಣಿದು ನೂರಾರು ಜನರನ್ನು ರಂಜಿಸಿದರು.

ತಂಡದ ಮುಖ್ಯಸ್ಥೆ ಮಾನಸಿ ಮಾತನಾಡಿ, ಕಣ್ಣುಕೋರೈಸುವ, ಕಲಾವಿದರಿಗೆ ಕಿರಿಕಿರಿಯಾಗಿಸುವ ಹೆಲೋಜಿಲ್- ಎಲ್ ಇ ಡಿ ಬೆಳಕಿಲ್ಲದೆ ನಾವು ಸುಲಲಿತವಾಗಿ ಕಲಾ ಪ್ರದರ್ಶನ ಮಾಡಿದೆವು. ನಮ್ಮ ತಂಡ ವೃಧ್ಧಾಶ್ರಮ, ಸರ್ಕಾರಿ ಹಾಸ್ಟೆಲ್, ವಿಶೇಷ ಮಕ್ಕಳ ಶಾಲೆಗಳಲ್ಲಿ ಉಚಿತ ಪ್ರದರ್ಶನ ಕೊಟ್ಟಿದ್ದೇವೆ. ದೊಂದಿ ಭರತನಾಟ್ಯ ಮಾಡೋದು ಗುರುಗಳಾದ ಸುಧೀರ್ ಅವರ ಕನಸು. ಹಲವು ದಿನಗಳ ಪರಿಶ್ರಮ ಇಂದು ಸಾಕಾರಗೊಂಡಿದೆ. ದೊಂದಿ ನಿರ್ಮಾಣ ಮಾಡಿದ ಕಾರ್ತಿಕ್, ಕಾಡಿನ ಚಿತ್ರಣ ಬದಲಿಸಿದ ರಾಜು ಮಣಿಪಾಲ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ಕರಾವಳಿ ಜಿಲ್ಲೆ ಉಡುಪಿಯಲ್ಲಿ ದೊಂದಿ ಬೆಳಕಲ್ಲಿ ಯಕ್ಷಗಾನ, ಭೂತಕೋಲ ನಾಗಾರಾಧನೆ ಅಪರೂಪಕ್ಕೊಮ್ಮೆ ನಡೆಯುತ್ತವೆ. ನೃತ್ಯ ನಿಕೇತನ ಕೊಡವೂರು ಸಂಸ್ಥೆ ಭರತನಾಟ್ಯವನ್ನು ಪಂಜಿನ ಬೆಳಕಲ್ಲಿ ಮಾಡುವ ಮೂಲಕ ವಿಭಿನ್ನ ಕಾರ್ಯಕ್ರಮದ ಪ್ರಯೋಗ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *