ಕಿ.ಮೀಗಟ್ಟಲೇ ರಾಶಿರಾಶಿ ಮೀನುಗಳು – ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’

Public TV
2 Min Read

– ನೆಲದಡಿಯಿಂದ ಭೂಮಿಗೆ ಬಂತು ‘ಪೆನ್ನಿಸ್ ಫಿಶ್’
– ಚಂಡಮಾರುತದ ಪ್ರಭಾವದಿಂದ ಭೂಮಿಯಲ್ಲಿ ಪ್ರತ್ಯಕ್ಷ

ಕ್ಯಾಲಿಫೋರ್ನಿಯಾ: ನೋಡಲು ವಿಶೇಷವಾಗಿ ಕಾಣುವ ‘ಪೆನ್ನಿಸ್ ಫಿಶ್’ ಅಮೆರಿಕದ ಕ್ಯಾಲಿಫೋರ್ನಿಯಾದ ಡ್ರೇಕ್ಸ್ ಬೀಚ್‍ಗೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪಳಿಸಿದ್ದು, ಅಲ್ಲಿನ ಜನರನ್ನು ಅಚ್ಚರಿಗೊಳಪಡಿಸಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಇವುಗಳನ್ನು ನೋಡಿದ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೀನುಗಳಂತೆ ಕಂಡರೂ ಇವು ಮೀನುಗಳಲ್ಲ. ಕೊಬ್ಬುಗಳನ್ನು ತುಂಬಿದ ದೇಹವನ್ನು ಹೊಂದಿದ ಇವುಗಳನ್ನು ‘ಇನ್‍ಕೀಪರ್’ ಹುಳು ಎಂದು ಕರೆಯಲಾಗುತ್ತದೆ. ಈ ಹುಳು ನೋಡಲು ಪುರುಷನ ಮರ್ಮಾಂಗದ ರೀತಿ ಇರುವುದರಿಂದ ಇವುಗಳಿಗೆ ‘ಪೆನ್ನಿಸ್ ಫಿಶ್’ ಎಂಬ ಹೆಸರು ಬಂದಿದೆ.

ಈ ಜೀವಿಗಳು ಸಮುದ್ರದ ಆಳದ ಕೆಸರು, ಮರಳಿನಲ್ಲಿ ಜೀವಿಸುತ್ತದೆ. ಆದ್ದರಿಂದ ಮನುಷ್ಯನ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸುಮಾರು 25 ವರ್ಷಗಳ ಕಾಲ ಸಮುದ್ರದ ಅಡಿಯಲ್ಲಿ ಈ ಜೀವಿಗಳು ವಾಸಿಸುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು 

ಡಿ.6 ರಂದು ಕಾಣಿಸಿಕೊಂಡ ಚಂಡಮಾರುತ ಈ ಹುಳಗಳನ್ನು ಸಮುದ್ರದ ಆಳದಿಂದ ದಡಕ್ಕೆ ತಂದು ಎಸೆದಿದೆ. ಮಣ್ಣಿನ ಅಡಿಯ 1 ಇಂಚಿನ ಆಳದಲ್ಲಿ ಇವು ವಾಸಿಸುತ್ತವೆ. ಆ ವೇಳೆ ‘ಯು’ ಅಕ್ಷರದ ರೀತಿಯಲ್ಲಿ ಕಂಡು ಬರುವುದರಿಂದ ವಿಜ್ಞಾನಿಗಳು ಇವುಗಳನ್ನು ‘ಇನ್‍ಕೀಪರ್’ ಎಂದು ಕರೆದಿದ್ದಾರೆ. ಇವುಗಳಿಗೆ ಚಾಕು ಆಕಾರದ ಅಂಗವಿದ್ದು, ನೀರಲ್ಲಿ ಈಜಲು ಹಾಗೂ ಆಹಾರ ಸೇವಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತದೆ.

ಸುಮಾರು 12 ಇಂಚಿನಷ್ಟು ಉದ್ದ ಬೆಳೆಯುವ ಈ ಹುಳಗಳು ಸಮುದ್ರದ ಆಳದಲ್ಲಿ ದೊರೆಯುವ ಬ್ಯಾಕ್ಟೀರಿಯಾ ಅಥವಾ ಸಣ್ಣ ಸಣ್ಣ ಜೀವಿಗಳನ್ನು ಸೇವಿಸುತ್ತವೆ. ಲೋಳೆಯಂತಹ ಪರದೆಯನ್ನು ಬಳಸಿ ತಮಗೇ ಬೇಕಾದ ಆಹಾರವನ್ನು ಸೆರೆಹಿಡಿಯುತ್ತವೆ. ಈ ಜೀವಿಗಳಿಗೆ 300 ದಶಲಕ್ಷ ವರ್ಷಗಳ ಇತಿಹಾಸವಿದೆ ಎಂದು ವಿಜ್ಞಾನಿಗಳು ಪುರಾವೆಗಳನ್ನು ನೀಡಿದ್ದಾರೆ.

ಇವುಗಳ ಗಾತ್ರ ಹಾಗೂ ಆಕಾರ, ಮೃದವಾದ ದೇಹದ ಕಾರಣದಿಂದ ಸಾಕಷ್ಟು ತೊಂದರೆಗಳನ್ನು ಹೊಂದಿದ್ದು, ವಿಜ್ಞಾನಿಗಳು ಇವುಗಳನ್ನು ನಿಷ್ಕ್ರಿಯ ಜೀವಿಗಳು ಎಂದು ಕರೆಯುತ್ತಾರೆ. ಅಮೆರಿಕ, ಕೊರಿಯಾ, ಜಪಾನ್, ಚೀನಾದ ಸಮುದ್ರ ಭಾಗಗಳಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹುಳಗಳನ್ನು ತಿನ್ನಲಾಗುತ್ತದೆ. ಸೇವಿಸಿದವರು ಉಪ್ಪು, ಸಿಹಿ ಎರಡು ರೀತಿಯ ಅನುಭವ ಆಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *