ಬೀದಿಬದಿ ವ್ಯಾಪಾರಿಗಳ ಮೇಲೆ ಖಾಕಿ ದರ್ಪ

Public TV
1 Min Read

ಕೊಪ್ಪಳ: ಹನುಮ ಜನಿಸಿದ ನಾಡು ಅಂಜನಾದ್ರಿಯಲ್ಲಿ ಬೀದಿಬದಿ ಬಡವ್ಯಾಪಾರಿಗಳ ಮೇಲೆ ಇದೀಗ ಖಾಕಿ ತನ್ನ ದರ್ಬಾರ್ ಮಾಡುತ್ತಿದೆ. ಖಾಕಿಯ ದರ್ಬಾರ್ ಗೆ ಸುಮಾರು ವರ್ಷಗಳಿಂದ ಕಾಯಿ- ಕರ್ಪೂರ ಮಾರುತ್ತಿದ್ದವರ ಬದಕು ಇದೀಗ ಬೀದಿಗೆ ಬಂದಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಈ ಘಟನೆ ನಡೆದಿದ್ದು, ಸಣ್ಣಪುಟ್ಟ ಅಂಗಡಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರ ಮೇಲೆ ಖಾಕಿ ಕಣ್ಣು ಬಿದ್ದಿದೆ. ಸುಮಾರು ವರ್ಷಗಳಿಂದ ಅಂಜನಾದ್ರಿಯಲ್ಲೆ ಬೀದಿ ಬದಿಯಲ್ಲಿ ಹಣ್ಣು- ಹಂಪಲು, ಕಾಯಿ- ಕರ್ಪೂರ, ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್‍ಐ ದೊಡ್ಡಪ್ಪನ ಕಣ್ಣು ಬಿದ್ದಿದೆ.

ರಾತ್ರಿ ವೇಳೆ ಅಂಜನಾದ್ರಿಗೆ ಆಗಮಿಸಿದ ಪೊಲೀಸರು ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ಏಕಾಏಕಿ ಗೂಡಂಗಡಿಗಳನ್ನು ಕಿತ್ತೆಸೆದಿದ್ದಾರೆ. ವಿಷಯ ತಿಳಿದ ಅಂಗಡಿಯವರು ರಾತ್ರಿಯೇ ಗಂಗಾವತಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆದರೆ ಮಹಿಳೆಯರು ಎಂಬುದನ್ನು ನೋಡದೆ ಠಾಣೆಯಲ್ಲಿಯೂ ಅವರನ್ನು ಬಾಯಿಗೆ ಬಂದ ಹಾಗೆ ನಿಂದಿಸಿ ಕಳುಹಿಸಿದ್ದಾರೆ ಎಂದು ಮಹಿಳೆಯರು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ.

ಪಿಎಸ್‍ಐ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವ್ಯಾಪಾರಸ್ಥರು ಅಂಜನಾದ್ರಿಯಲ್ಲಿ ಅಂಗಡಿ ಮಾಡಬೇಕಾದರೆ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲಿ ಕೊಡಬೇಕು. ಈ ರೀತಿ ಮಾಮೂಲಿ ಕೊಟ್ಟ ಒಬ್ಬೊಬ್ಬರಿಗೆ ಎರಡೆರಡು ಅಂಗಡಿ ಹಾಕುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ನಾವು ಸಣ್ಣಪುಟ್ಟ ಹೂ, ಹಣ್ಣು, ಕಾಯಿ, ಶೆಂಗಾ, ವ್ಯಾಪಾರ ಮಾಡುವವರು ನಾವು ದುಡಿದಿದ್ದು ನಮ್ಮ ಹೊಟ್ಟೆಗೆ ಸಾಲುವುದಿಲ್ಲ. ಇನ್ನೂ ಪೊಲೀಸರಿಗೆ ಎಲ್ಲಿಂದ ಮಾಮೂಲಿ ಕೋಡೋಣ ಎಂದರು.

ನಾವು ಹಣ ಕೊಡಲ್ಲಾ ಎಂದು ತಿಳಿದ ಪೊಲೀಸರು ಈ ರೀತಿ ನಮ್ಮ ಅಂಗಡಿಗಳನ್ನು ಕಿತ್ತೆಸೆದು ನಮ್ಮ ಬದಕನ್ನು ಬೀದಿಪಾಲು ಮಾಡಿದ್ದಾರೆ ಎಂದು ಅಲ್ಲಿ ವ್ಯಾಪಾರ ಮಾಡುತ್ತಿರುವವರು ಗಂಗಾವತಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಮನೆಗೂ ಮಹಿಳೆಯರು ಭೇಟಿ ನೀಡಿದ್ದು, ಈ ಬಗ್ಗೆ ಶಾಸಕರು ವಿಚಾರಣೆ ಮಾಡುತ್ತೆನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *