ಭಾರತದ ಇತಿಹಾಸದಲ್ಲೇ ಕರಾಳ ದಿನ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸೋನಿಯಾ ಕಿಡಿ

Public TV
2 Min Read

ನವದೆಹಲಿ: ರಾಜ್ಯ ಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಪಾಸ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೆಂಡಾಮಂಡಲರಾಗಿದ್ದು, ಇದೊಂದು ‘ಕರಾಳ ದಿನ’ ಎಂದು ಸಂಭೋದಿಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರವು ಭಾರತದ ಬಹುತ್ವದ ಮೇಲೆ ಸಂಕುಚಿತ ಮನಸ್ಸಿನ ಹಾಗೂ ಧರ್ಮಾಂಧ ಶಕ್ತಿಗಳ ವಿಜಯವನ್ನು ಸೂಚಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

ಧರ್ಮದ ಆಧಾರದ ಮೇಲೆ ನಿರಾಶ್ರಿತರಿಗೆ ಪೌರತ್ವ ನೀಡುವ ಮಸೂದೆಯು ಭಾರತದ ಪರಿಕಲ್ಪನೆಯನ್ನು ಸೋಲಿಸಿದೆ. ನಮ್ಮ ಪೂರ್ವಜರ ಪರಿಕಲ್ಪನೆಯನ್ನು ಈ ಮಸೂದೆ ಪ್ರಶ್ನಿಸುತ್ತದೆ. ಧರ್ಮವು ರಾಷ್ಟ್ರದ ನಿರ್ಣಾಯಕವಾಗಿದೆ. ವಿಚಲಿತ, ವಿಕೃತ ಹಾಗೂ ವಿಭಜಿತ ಭಾರತವನ್ನು ಸೃಷ್ಟಿಸಲಾಗುತ್ತಿದೆ. ಸಂವಿಧಾನದ ಪ್ರತಿಪಾದಿಸಲಾಗಿರುವ ಸಮಾನತೆ ಮತ್ತು ಧಾರ್ಮಿಕ ತಾರತಮ್ಯರಹಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸೋನಿಯಾ ಕಿಡಿಕಾರಿದ್ದಾರೆ.

ಧರ್ಮ, ಪ್ರದೇಶ, ಜಾತಿ, ಮತ, ಭಾಷೆ ಅಥವಾ ಜನಾಂಗವನ್ನು ಲೆಕ್ಕಿಸದೇ ಎಲ್ಲರಿಗೂ ಮುಕ್ತವಾಗಿರುವ ಭಾರತವನ್ನು ಇದೀಗ ನಿರಾಕರಿಸುವಂತೆ ಮಾಡಲಾಗಿದೆ. ಐತಿಹಾಸಿಕವಾಗಿ, ಭಾರತವು ಎಲ್ಲ ರಾಷ್ಟ್ರಗಳು ಧರ್ಮಗಳಿಗೆ ಕಿರುಕ್ಕೊಳಗಾದವರಿಗೆ ಆಶ್ರಯ ನೀಡಿದೆ. ಆದರೆ ಬಿಜೆಪಿ ಸರ್ಕಾರ ವಿಭಜಿಸಿದೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.

ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರವಾಗಿದೆ. ರಾಜ್ಯ ಸಭೆಯಲ್ಲಿ ಮಸೂದೆಯ ಪರವಾಗಿ 125 ಮತ್ತು ವಿರೋಧವಾಗಿ 105 ಮತಗಳು ಬಿದ್ದವು.

ಆರಂಭದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವನೆಗೆ ಸೋಲುಂಟಾಯಿತು. ಆಯ್ಕೆ ಸಮಿತಿಗೆ ಕಳುಹಿಸುವಂತೆ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಒತ್ತಾಯಿಸಿದ್ದವು. ಇಲ್ಲಿ ಸರ್ಕಾರದ ಪರ 124 ಮತ್ತು ವಿರೋಧವಾಗಿ 99 ಮತಗಳು ಬಿದ್ದಿದ್ದವು. ಇನ್ನು ಶಿವಸೇನೆಯ ಸಂಸದರು ಸಭಾತ್ಯಾಗ ಮಾಡುವ ಮೂಲಕ ಮತದಾನ ಬಹಿಷ್ಕರಿಸಿದರು. ಪೌರತ್ವ ತಿದ್ದುಪಡಿ ಮಸೂದೆ 311 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿತ್ತು.

ಗೃಹ ಸಚಿವ ಅಮಿತ್ ಶಾ ಅವರು ಮಧ್ಯಾಹ್ನ 2 ಗಂಟೆಗೆ ಬಿಲ್ ಮಂಡಿಸಿದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದು ಭಾರತ ಗಣರಾಜ್ಯದ ಮೇಲಿನ ಹಲ್ಲೆ. ದೇಶದ ಆತ್ಮಕ್ಕೆ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಅಂತ ಪ್ರತಿಪಾದಿಸಿದರು. ಆದರೂ ಅಮಿತ್ ಶಾ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಈ ಮಸೂದೆಯಿಂದ ಮುಸ್ಲಿಮರು ಯಾವುದೇ ಗೊಂದಲ, ಆತಂಕಕ್ಕೀಡಾಗೋದು ಬೇಡ. ಭಾರತೀಯ ಮುಸ್ಲೀಮರು ಇಂದಿಗೂ, ಎಂದೆಂದಿಗೂ ಭಾರತೀಯ ಪೌರರು ಎಂದು ಅಮಿತ್ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು.

Share This Article
Leave a Comment

Leave a Reply

Your email address will not be published. Required fields are marked *