ಕೇರಳ ನರ್ಸ್ ಲಿನಿಗೆ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ

Public TV
2 Min Read

ನವದೆಹಲಿ: ನಿಫಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಕೇರಳದ ನರ್ಸ್ ಲಿನಿ ಅವರಿಗೆ ಮರಣೋತ್ತರ ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ನೀಡಲಾಗಿದೆ.

ನವದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲಿನಿ ಅವರ ಪತಿ ರಾಜೇಶ್ ಪುತೂರ್ ಅವರಿಗೆ ಇಂದು ಪ್ರಶಸ್ತಿ ನೀಡಿದ್ದಾರೆ. ಇದೇ ವೇಳೆ 18 ಜನ ನರ್ಸ್ ಗಳಿಗೂ ‘ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಫಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

ಭಾರತ ಸರ್ಕಾರವು 1973ರಿಂದ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಮೂಲಕ ನರ್ಸಿಂಗ್ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿದ ನರ್ಸ್ ಹಾಗೂ ನರ್ಸಿಂಗ್ ಕ್ಷೇತ್ರದ ಪ್ರಾಧ್ಯಾಪಕರನ್ನು ಗೌರವಿಸಲಾಗುತ್ತಿದೆ.

ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಬಲಿಯಾಗುವುದಕ್ಕೂ ಮುನ್ನ ಪತಿಗೆ ಕೇರಳದ ನರ್ಸ್ ಒಬ್ಬರು ಭಾವನಾತ್ಮಕ ಪತ್ರ ಬರೆದಿದ್ದರು. ಪತ್ರದಲ್ಲಿ ತಾನು ಸಾಯುವುದು ಖಚಿತವಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದರು.

ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಫಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿದ್ದ ಅವರು ನಾನು ಬಹುತೇಕ ಸಾಯುವುದು ಖಚಿತವಾಗಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದರು.

ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *