ಚೀನಾ ಹಡಗನ್ನು ಓಡಿಸಿದ ಭಾರತೀಯ ನೌಕಾಪಡೆ

Public TV
1 Min Read

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾ ಸೇನೆ ಚೀನಾದ ಹಡಗನ್ನು ಓಡಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಭಾರತದ ಗಡಿ ವ್ಯಾಪ್ತಿಯ ಅಂಡಮಾನ್ ನಿಕೋಬರ್ ದ್ವೀಪದ ಬಳಿ ಚೀನಾದ ಹಡಗು ಶಂಕಾಸ್ಪದ ರೀತಿಯಲ್ಲಿ ಕಾರ್ಯಚರಣೆ ನಡೆಸುತ್ತಿರುವ ವಿಚಾರವನ್ನು ಭಾರತ ನೌಕಾಸೇನೆಯ ಕಣ್ಗಾವಲು ಪಡೆಯ ವಿಮಾನ ಗುರುತಿಸಿತ್ತು.

ಆಗ್ನೇಯ ಏಷ್ಯಾದ ಸಮುದ್ರದಲ್ಲಿ ಚೀನಾದ ಶಿ ಯಾನ್ 1 ಎಂಬ ಹಡಗು ಭಾರತದ ಸಮುದ್ರ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಬಂದು ಕಾರ್ಯಾಚರಣೆ ನಡೆಸುತ್ತಿತ್ತು. ಇದು ಭಾರತೀಯ ನೌಕಪಡೆಗೆ ತಿಳಿದ ತಕ್ಷಣ ಭಾರತೀಯ ಯುದ್ಧನೌಕೆಯನ್ನು ಕಳುಹಿಸಿ ಚೀನಾದ ಹಡಗಿನ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಈ ವೇಳೆ ಅ ಹಡಗು ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಸಂಶೋಧಾನಾ ಚಟುವಟಿಕೆ ನಡೆಸುತಿತ್ತು ಎಂಬ ವಿಚಾರ ತಿಳಿದು ಬಂದಿದೆ.

ನಿಯಮದ ಪ್ರಕಾರ ವಿದೇಶಿ ಹಡಗುಗಳು ಭಾರತದ ಕಡಲ ತೀರದಲ್ಲಿ ಯಾವುದೇ ರೀತಿಯ ಸಂಶೋಧನೆಗಳನ್ನು ನಡೆಸಲು ಅನುಮತಿ ಇಲ್ಲ. ಭಾರತೀಯ ನೌಕಸೇನೆಯೂ ಚೀನಾದವರಿಗೆ ಯಾವುದೇ ಸಂಶೋಧನೆ ನಡೆಸಲು ಬಿಡದೆ, ಅದನ್ನು ಭಾರತ ಸಮುದ್ರ ತೀರ ಬಿಟ್ಟು ಹೋಗುವಂತೆ ಸೂಚಿಸಿದೆ. ಭಾರತೀಯ ನೌಕಪಡೆಯ ಸೂಚನೆಗೆ ಹೆದರಿದ ಚೀನಾ ಹಡಗು ತಕ್ಷಣ ಭಾರತದ ಕಡಲ ತೀರ ಬಿಟ್ಟು ಚೀನಾದ ಕಡೆಗೆ ಹೋಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತೀಯ ನೌಕಪಡೆಯು ಚೀನಾದದಿಂದ ಬರುವ ಹಡಗುಗಳ ಮೇಲೆ ಸದಾ ಜಾಗರೂಕತೆಯಿಂದ ಇದ್ದು, ಇತ್ತೀಚಿಗೆ ಭಾರತದ ಪಿ-8ಐ ಕಣ್ಗಾವಲು ವಿಮಾನಗಳು ಭಾರತದ ಕಡಲ ತೀರದ ಸುತ್ತು ಕಾರ್ಯಚರಣೆ ಮಾಡುತ್ತಿದ್ದ ಏಳು ಚೀನಾ ಹಡಗುಗಳ ಬಗ್ಗೆ ಮಾಹಿತಿ ಕಲೆಹಾಕಿ ಅವುಗಳ ಚಿತ್ರಗಳನ್ನು ಕ್ಲಿಕ್ ಮಾಡಿ ಕಳುಹಿಸಿದ್ದವು.

ಕಡಲ್ಗಳ್ಳತನ ವಿರೋಧಿ ಗಸ್ತು ತಿರುಗುವ ಉದ್ದೇಶದಿಂದ ಚೀನಾದ ನೌಕಾಪಡೆಯು ಆಗಾಗ ಭಾರತದ ಸಮುದ್ರವನ್ನು ಪ್ರವೇಶಿಸುತ್ತದೆ. ಚೀನಾದ ಯುದ್ಧನೌಕೆಗಳು ಪರಮಾಣು ಮತ್ತು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳೊಂದಿಗೆ ಬರುವುದರಿಂದ ಭಾರತೀಯ ನೌಕಪಡೆ ಚೀನಾ ಹಡಗುಗಳನ್ನು ಸಂಪೂರ್ಣವಾಗಿ ಗಮನಿಸುತ್ತಿರುತ್ತವೆ.

Share This Article
Leave a Comment

Leave a Reply

Your email address will not be published. Required fields are marked *