ಸರ್ಕಾರದಲ್ಲಿ ಮಂತ್ರಿ ಸ್ಥಾನ – ಮೋದಿ ಆಫರ್ ಬಗ್ಗೆ ಸುಪ್ರಿಯಾ ಸುಳೆ ಪ್ರತಿಕ್ರಿಯೆ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಆಫರ್ ನೀಡಿದ್ದರು. ಆದರೆ ನಮ್ಮ ತಂದೆ ಅಷ್ಟೇ ಸೌಜನ್ಯವಾಗಿ ಅದನ್ನು ತಿರಸ್ಕರಿಸಿದರು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ನಾಯಕಿ, ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಒಟ್ಟಿಗೆ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು ಎಂಬ ಶರದ್ ಪವಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರೂ ಹಿರಿಯ ನಾಯಕರ ಮಧ್ಯೆ ನಡೆದ ಸಭೆಯಲ್ಲಿ ನಾನು ಇರಲಿಲ್ಲ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ತಂದೆ ಶರದ್ ಪವಾರ್ ಅವರಿಗೆ ಒಟ್ಟಿಗೆ ಕೆಲಸ ಮಾಡುವ ಕುರಿತು ದೊಡ್ಡ ಆಫರ್ ನೀಡಿದ್ದರು. ಇಬ್ಬರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದರು. ಆದರೆ ಮಹಾರಾಷ್ಟ್ರದಲ್ಲಿ ವೈಯಕ್ತಿಕ ಸಂಬಂಧಗಳು ತುಂಬಾ ಮುಖ್ಯ. ಅಲ್ಲದೆ ಬಿಜೆಪಿ ಹಾಗೂ ಎನ್‍ಸಿಪಿ ನಡುವೆ ಸೈದ್ಧಾಂತಿಕ ವ್ಯತ್ಯಾಸ ಕೂಡ ಇದೆ ಎಂದು ಸುಪ್ರಿಯಾ ಅಭಿಪ್ರಾಯಪಟ್ಟಿದ್ದಾರೆ.

ಶರದ್ ಪವಾರ್ ನನ್ನ ತಂದೆ ಮಾತ್ರವಲ್ಲ ಬಾಸ್ ಕೂಡ ಹೌದು. ನಿಮಗೆ ಗೊತ್ತಿರಬಹುದು ನಮ್ಮ ಬಾಸ್ ಯಾವಾಗಲೂ ಸರಿ ಇರುತ್ತಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಾನು ಅವರ ಪ್ರಸ್ತಾಪವನ್ನು ತಿರಸ್ಕಾರ ಮಾಡಿದೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಮೋದಿ ನಾವು ಒಟ್ಟಿಗೆ ಕೆಲಸ ಮಾಡಬೇಕೆಂದು ಬಯಸಿದ್ದರು. ಆದರೆ ನಮ್ಮ ವೈಯಕ್ತಿಕ ಜೀವನದಲ್ಲಿ ನಮ್ಮಿಂಬ್ಬರ ಸಂಬಂಧ ಚೆನ್ನಾಗಿದೆ. ಅದು ಹಾಗೆಯೇ ಇರುತ್ತದೆ. ಆದರೆ ನಾವು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಪವಾರ್ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಶರದ್ ಪವಾರ್, ಮೋದಿ ಸರ್ಕಾರ ನನ್ನನ್ನು ರಾಷ್ಟ್ರಪತಿ ಮಾಡುತ್ತೆ ಎಂದು ಹೇಳಿಲ್ಲ. ಬದಲಾಗಿ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಮಗಳಾಗಿದ್ದು, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಿಂದ ಎನ್‍ಸಿಪಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಶರದ್ ಪವಾರ್ ಮತ್ತು ಮೋದಿ ಉತ್ತಮ ಸ್ನೇಹಿತರಾಗಿದ್ದು, ಕಳೆದ ತಿಂಗಳು ಮಹಾರಾಷ್ಟ್ರ ಸರ್ಕಾರ ರಚನೆಯ ನಾಟಕೀಯ ಬೆಳವಣಿಗೆ ಮಧ್ಯೆಯೂ ಪ್ರಧಾನಿ ಮೋದಿ ಅವರನ್ನು ಪವಾರ್ ಭೇಟಿಯಾಗಿದ್ದರು.

ಮೋದಿ ಅವರು ಪ್ರತಿಬಾರಿಯೂ ಪವಾರ್ ಅವರನ್ನು ಹೊಗಳುತ್ತ ಬಂದಿದ್ದಾರೆ ಈ ಬಾರಿಯ ಚುನಾವಣಾ ಸಮಯದಲ್ಲಿಯೂ ಕೂಡ ಶರದ್ ಪವಾರ್ ವಿರುದ್ಧ ವಾಗ್ದಾಳಿ ಮಾಡಬಾರದು ಎಂದು ಪಕ್ಷಕ್ಕೆ ಸೂಚಿಸಿದ್ದರು. ಕಳೆದ ತಿಂಗಳು ರಾಜ್ಯಸಭೆಯ 250 ನೇ ಅಧಿವೇಶನದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಮೋದಿ, ಸಂಸತ್ತಿನ ಮಾನದಂಡಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಎನ್‍ಸಿಪಿಯಿಂದ ಕಲಿಯಬೇಕು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *