ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇನ್ಫೋಸಿಸ್ ದಂಪತಿಯ ಪುತ್ರ

Public TV
1 Min Read

ಬೆಂಗಳೂರು: ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಮಗನ ಮದುವೆ ಸೋಮವಾರ ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆದಿದೆ.

ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ಮದುವೆಯಾಗಿದ್ದಾರೆ. ಮದುವೆಯಲ್ಲಿ ರೋಹನ್ ಕಪ್ಪು ಬಣ್ಣದ ಪ್ಯಾಂಟ್ ಹಾಕಿ ಪ್ಲೇನ್ ಕುರ್ತಾ ಧರಿಸಿದರೆ, ಅರ್ಪಣಾ ನಳಿ ಬಣ್ಣದ ಲೆಹೆಂಗಾ ಧರಿಸಿ ಮದುವೆಯಲ್ಲಿ ಮಿಂಚಿದ್ದಾರೆ. ಇವರ ಆರತಕ್ಷತೆಗೆ ಗಾಯಕಿ ಬಾಂಬೆ ಜಯಶ್ರೀ ಅತಿಥಿಯಾಗಿ ಆಗಮಿಸಿದ್ದರು.

ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು. ಇವರ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಯಾಗಿ ಮನೆಯವರ ಒಪ್ಪಿಗೆ ಮೆರಿಗೆ ಮದುವೆಯಾಗಿದ್ದಾರೆ. ಈ ಮದುವೆ ಸರಳವಾಗಿ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದರು.

ಅರ್ಪಣಾ ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.

ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು, ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೋಹನ್ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ. ರೋಹನ್ `ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ವನ್ನು ಸ್ಥಾಪಿಸಿದ್ದರು. ಕಳೆದ ಎರಡು ಸಹಸ್ರಮಾನಗಳಿಂದ ಭಾರತದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ವಿಶ್ವದ ಅತಿದೊಡ್ಡ ಓದುಗರವರೆಗೆ ಪ್ರಸ್ತುತಪಡಿಸುವುದು ಅವರ ಗುರಿಯಾಗಿದೆ.

ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು. ಬಳಿಕ 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *