ಕೆ.ಆರ್ ಪೇಟೆಯಲ್ಲಿ ‘ಒಕ್ಕಲಿಗ’ ಮತಗಳತ್ತ ಎಲ್ಲರ ಚಿತ್ತ

Public TV
2 Min Read

-ಬಿಜೆಪಿಯಿಂದ ಪ್ರತಿ ಜಾತಿಗೊಂದು ಸಮಾವೇಶ

ಮಂಡ್ಯ: ಉಪಚುನಾವಣೆ ನಡೆಯುತ್ತಿರುವ ಕೆ.ಆರ್.ಪೇಟೆಯಲ್ಲಿ ಒಕ್ಕಲಿಗರ ಪ್ರ್ರಾಬಲ್ಯ ಹೆಚ್ಚಿದೆ. ಹೀಗಾಗಿ ರಾಜಕೀಯ ಪಕ್ಷಗಳು ಒಕ್ಕಲಿಗರ ಮತಗಳ ಬೇಟೆಗೆ ಮುಂದಾಗಿವೆ. ಆದರೆ ಬಿಜೆಪಿ ಒಕ್ಕಲಿಗರ ಜೊತೆ ಜೊತೆಗೆ ಸಣ್ಣ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ.

ಉಪಚುನಾವಣೆಗೆ ಇವತ್ತು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತಿದ್ದು, ಎಲ್ಲಾ 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಕೊನೆ ಕಸರತ್ತು ಜೋರಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ರಣಕಣದಲ್ಲಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಿವೆ. ಅತೀ ಹೆಚ್ಚು ಅಂದ್ರೆ 95 ಸಾವಿರ ಇರುವ ಒಕ್ಕಲಿಗ ಮತಗಳ ಮೇಲೆ ಎಲ್ಲರ ಕಣ್ಣು ಇದೆ. ಈ ಸಮುದಾಯದ ಮತಗಳನ್ನು ಪಡೆಯಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದು ಒಕ್ಕಲಿಗ ಸಮುದಾಯದ ಮತಗಳ ಬೇಟೆಗೆ ನಿಂತಿವೆ.

ಈ ಎರಡು ಪಕ್ಷಗಳಿಗಿಂತ ವಿಭಿನ್ನ ಎಂಬಂತೆ ಬಿಜೆಪಿ ಒಕ್ಕಲಿಗ ಸಮುದಾಯದ ಜೊತೆ ಈ ಕ್ಷೇತ್ರದಲ್ಲಿ ಇರುವ ಕುರುಬ, ಕುಂಬಾರ, ದಲಿತ, ಈಡಿಗ, ಲಿಂಗಾಯಿತ, ಬ್ರಾಹ್ಮಣ, ಮಡಿವಾಳ, ಶೆಟ್ಟರು, ವಿಶ್ವಕರ್ಮ ಅಲ್ಲದೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಇತರೆ ಸಣ್ಣ ಸಮುದಾಯದ ಮತಗಳನ್ನು ಸಂಪೂರ್ಣವಾಗಿ ತಮ್ಮ ಕಡೆ ಸೆಳೆಯಬೇಕೆಂದು ತಂತ್ರಗಾರಿಕೆ ರಚಿಸಿಕೊಂಡಿವೆ.

ಒಕ್ಕಲಿಗ ಸಮುದಾಯದ ಮತಗಳನ್ನು ಶೇಕಡ 20ರಷ್ಟು ಪಡೆಯುವುದರ ಜೊತೆ ಸಣ್ಣ ಸಮುದಾಯದ ಎಲ್ಲಾ ಮತಗಳನ್ನು ಪಡೆದರೆ ಗೆಲುವು ನಿಶ್ಚಿತ ಎಂಬುವುದು ಬಿಜೆಪಿಯ ಲೆಕ್ಕಾಚಾರ. ಇದರ ಜೊತೆ ಒಕ್ಕಲಿಗ ಸಮುದಾಯದಲ್ಲಿ ಇರುವ ಉಪ ಜಾತಿಗಳ ಮತಗಳನ್ನು ಪಡೆಯುವುದು ಬಿಜೆಪಿಯ ಮೊದಲ ಆದ್ಯತೆ ಆಗಿದೆ. ಹೀಗಾಗಿ ಬಿಜೆಪಿ ಪ್ರತಿನಿತ್ಯ ಆಯಾ ಜಾತಿಗಳ ಮುಖಂಡರನ್ನು ಕರೆಸಿ, ಸಣ್ಣ ಸಣ್ಣ ಸಮುದಾಯಗಳ ಸಮಾವೇಶ ನಡೆಸಿ ಅವರುಗಳನ್ನು ಬಿಜೆಪಿ ಕಡೆ ವಾಲುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಆಯಾ ಜಾತಿಗಳ ನಾಯಕರುಗಳು ಕ್ಷೇತ್ರದಲ್ಲಿ ಆಯಾ ಸಮುದಾಯದ ಜನರನ್ನು ನಾರಾಯಣಗೌಡ ಅವರಿಗೆ ಮತ ಹಾಕುವಂತೆ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಒಟ್ಟಾರೆ ಬಿಜೆಪಿ ಒಕ್ಕಲಿಗರ ಸಮುದಾಯದ ಮತಗಳ ಜೊತೆಗೆ ಇತರೆ ಸಣ್ಣ ಜಾತಿ-ಧರ್ಮಗಳ ಮತಗಳನ್ನು ಸೆಳೆಯುವ ಮೂಲಕ, ಜೆಡಿಎಸ್-ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸಲು ಮಾಸ್ಟರ್‍ಪ್ಲಾನ್ ಮಾಡಿದೆ. ಈ ಸ್ಟಾಟರ್ಜಿ ಬಿಜೆಪಿಗೆ ಎಷ್ಟರ ಮಟ್ಟಿಗೆ ವರದಾನವಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *