-ಇಲ್ಲೇನಿದೆ ಮಣ್ಣಂಗಟ್ಟಿ, ಅಲ್ಲಿ ಹೋಗಿ ಹಿಡಿರಿ
ಚಿಕ್ಕಬಳ್ಳಾಪುರ: ಚುನಾವಣಾ ಅಧಿಕಾರಿಗಳು ನಂದಿ ಚೆಕ್‍ಪೋಸ್ಟ್ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರ್ ತಪಾಸಣೆ ನಡೆಸಿದರು.
ಚಿಕ್ಕಬಳ್ಳಾಪುರ ಉಪಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಆಗಮಿಸಿದ್ದರು. ಚೆಕ್‍ಪೋಸ್ಟ್ ಬಳಿ ಅಧಿಕಾರಿಗಳು ತಡೆದು ಕಾರ್ ಪರಿಶೀಲನೆ ನಡೆಸಬೇಕೆಂದು ಹೇಳಿದರು. ಇದೇ ರೀತಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಕಾರ್ ಚೆಕ್ ಮಾಡಿದ್ದೀರಾ, ಯಾವುದಾದ್ರೂ ಹಣ ಸಿಕ್ಕಿದೆಯಾ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಮತ್ತು ಚುನಾವಣಾಧಿಕಾರಿ ನಡುವೆ ನಡೆದ ಸಂಭಾಷಣೆ ಹೀಗಿದೆ.
ಚುನಾವಣಾಧಿಕಾರಿ: ಸರ್ ಎಲೆಕ್ಷನ್ ಡ್ಯೂಟಿ.. ತಪಾಸಣೆ ಮಾಡ್ಬೇಕು.
ಸಿದ್ದರಾಮಯ್ಯ: ಅಯ್ಯೋ ಮಾಡೋ ಮಾರಾಯ.. ಏಯ್ ಮಾಡ್ರೀ.
ಸಿದ್ದರಾಮಯ್ಯ: ಯಾರದ್ದಾದ್ರೂ ಹಿಡಿದಿದ್ದೀರಾ ಇದಕ್ಕೂ ಮುಂಚೆ..?
ಚುನಾವಣಾಧಿಕಾರಿ: ಹೌದು ಸರ್ 5 ಲಕ್ಷ ರೂಪಾಯಿ ಮೊನ್ನೆ ಸೀಜ್ ಮಾಡಿದ್ದೀವಿ..
ಸಿದ್ದರಾಮಯ್ಯ: ಯಾರದು?
ಚುನಾವಣಾಧಿಕಾರಿ: ಯಾರೋ ಗ್ರಾನೈಟ್ ಅವರದ್ದು ಸರ್.. ತಗೊಂಡು ಹೋಗ್ತಿದ್ರು.
ಸಿದ್ದರಾಮಯ್ಯ: ಅಂಥವರದ್ದು ಹಿಡಿದ್ರೇ ಏನ್ ಪ್ರಯೋಜನ ರೀ.. ಸುಧಾಕರ್‍ದು ಯಾವಾದಾದ್ರೂ ಹಿಡಿದಿದ್ದೀರಾ..?
ಚುನಾವಣಾಧಿಕಾರಿ: ಇಲ್ಲ ಸರ್. ಅಂಥದ್ದು ಯಾವುದು ಬಂದಿಲ್ಲ ಸರ್..
ಸಿದ್ದರಾಮಯ್ಯ: ಅಲ್ಲಿ ಹಿಡೀರಿ ಹೋಗಿ ಅಂದ್ರೆ ಇಲ್ಲಿ ಬಂದಿದ್ದೀರಿ.. ನಡಿ ನಡಿ.. ಇಲ್ಲಿ ಏನ್ ಇದ್ದದ್ದು.. ಮಣ್ಣಂಗಟ್ಟಿ.
ತದನಂತರ ಮಂಚನಬಲೆ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಪರ ಮತಯಾಚಿಸಿದರು. ಮಂಚನಬಲೆ ಗ್ರಾಮಸ್ಥರು ಸಿದ್ದರಾಮಯ್ಯರಿಗೆ ಹೂ ಮಳೆ ಸುರಿಸುವ ಮೂಲಕ ಬರಮಾಡಿಕೊಂಡು, ಕುರಿಯನ್ನು ಕಾಣಿಕೆಯಾಗಿ ನೀಡಿದರು.