ಒಂದೂವರೆ ಗಂಟೆ ಫಾಲೋ ಮಾಡಿ 3 ಲಕ್ಷ ರೂ. ಎಗರಿಸಿದ ಕಳ್ಳರು

Public TV
2 Min Read

– ಬ್ಯಾಂಕ್‍ನಿಂದ ಹಣ ಡ್ರಾ ಮಾಡುವ ಗ್ರಾಹಕರೇ ಟಾರ್ಗೆಟ್
– ಸಿಸಿಟಿವಿ ದೃಶ್ಯಾವಳಿಯಿಂದ ಕೃತ್ಯ ಬಯಲು

ಹಾಸನ: ಬ್ಯಾಂಕ್‍ಗಳಲ್ಲಿ ಹಣ ಡ್ರಾ ಮಾಡೋರನ್ನ ಟಾರ್ಗೆಟ್ ಮಾಡಿ ಹಿಂಬಾಲಿಸಿ ಹಣ ಎಗರಿಸಿ ಎಸ್ಕೇಪ್ ಆಗುವ ಗ್ಯಾಂಗ್‍ಗಳೀಗ ರಾಜ್ಯದಲ್ಲಿ ತಲೆ ಎತ್ತಿದ್ದು, ಹಾಸನದಲ್ಲಿ ಬೈಕ್ ಡಿಕ್ಕಿಯಲ್ಲಿಟ್ಟಿದ್ದ 3 ಲಕ್ಷ ರೂ. ಹಣವನ್ನು ಖದೀಮರು ಸದ್ದಿಲ್ಲದೇ ಎಗರಿಸಿದ್ದಾರೆ.

ಗ್ರಾಹಕ ಬ್ಯಾಂಕಿನಿಂದ ಹಣ ಡ್ರಾ ಮಾಡಿದ್ದ ಕ್ಷಣದಿಂದ ಹಣ ಎಗರಿಸೋವರೆಗೂ ಅಂದರೆ ಸುಮಾರು ಒಂದೂವರೆ ಗಂಟೆ ಖದೀಮರು ಹಿಂಬಾಲಿಸಿ ದುಡ್ಡು ದೋಚಿದ್ದಾರೆ. ಈ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಾಸನದ ನಿವಾಸಿ ದಿನೇಶ್ ಅವರ ದುಡ್ಡಿಗೆ ಖದೀಮರು ಕನ್ನ ಹಾಕಿದ್ದಾರೆ. ಸಂಪಿಗೆ ರಸ್ತೆ ಐಡಿಬಿಐ ಬ್ಯಾಂಕಿನಿಂದ ದಿನೇಶ್ ಹಣ ಡ್ರಾ ಮಾಡಿದ್ದಾರೆ. ಬಳಿಕ ಅದನ್ನು ಹೆಲ್ಮೆಟ್ ಒಳಗಿಟ್ಟುಕೊಂಡು ಬಂದಿದ್ದರು. ಬೈಕ್ ಬಳಿ ಬಂದ ನಂತ್ರ ಹಣವನ್ನು ಡಿಕ್ಕಿಯಲ್ಲಿ ಇಡೋದನ್ನ ಖದೀಮರು ಗಮನಿಸಿ, ಮೂರು ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿದ್ದಾರೆ.

ಶುಕ್ರವಾರ ಮದ್ಯಾಹ್ನ 1:45ರ ವೇಳೆಗೆ ಬ್ಯಾಂಕ್‍ಗೆ ಹೋಗಿದ್ದ ದಿನೇಶ್ ಅವರು ಹಣವನ್ನ ಬೈಕ್ ಡಿಕ್ಕಿಯಲ್ಲಿಟ್ಟಿದ್ದನ್ನು ಕಳ್ಳರು ನೋಡಿದ್ದರು. ಅವರ ಪ್ರತೀ ಹೆಜ್ಜೆಯನ್ನೂ ಗಮನಿಸಿದ ಖದೀಮರು ದಿನೇಶ್ ಬೈಕ್ ಹತ್ತಿ ಹೋದರೂ ಅವರನ್ನೇ ಹಿಂಬಾಲಿಸಿದ್ದಾರೆ. ತಮ್ಮ ವರ್ಕ್ ಶಾಪ್ ಬಳಿ ಬೈಕ್ ನಿಲ್ಲಿಸಿ ದಿನೇಶ್ ತೆರಳಿದಾಗ, ಹಣ ಎಗರಿಸೋಕೆ ಬೈಕ್ ಬಳಿ ಕಳ್ಳರು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಅಲ್ಲಿಗೆ ಒಂದು ಆಪೆ ಆಟೋ ಬಂದು ನಿಲ್ಲುತ್ತದೆ. ಹೀಗಾಗಿ ಕಳ್ಳರು ಸುಮ್ಮನಾಗುತ್ತಾರೆ.

ಮೊದಲ ಪ್ರಯತ್ನ ವಿಫಲವಾಗಿ ಕಳ್ಳರು ವಾಪಸ್ ಹೋದ ನಂತರ 3:20ರ ವೇಳೆಗೆ ದಿನೇಶ್ ಮನೆಗೆ ಹೋದರು. ಈ ವೇಳೆ ಹೊರಗಡೆ ನಿಲ್ಲಿಸಿದ್ದ ಬೈಕ್‍ನಲ್ಲಿದ್ದ ಹಣವನ್ನು ಖದೀಮರು ಯಾರಿಗೂ ತಿಳಿಯದಂತೆ ಎತ್ತಿಕೊಂಡು ಪರಾರಿಯಾಗಿದ್ದಾರೆ. ದಿನೇಶ್ ಊಟ ಮಾಡಿ ವಾಪಸ್ ಬಂದು ಬೈಕ್ ನೋಡಿದಾಗಲೇ ಹಣ ಕಳ್ಳತನವಾಗಿದೆ ಎನ್ನುವುದು ಗೊತ್ತಾಗಿದೆ. ಬಳಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿಂದ ಖದೀಮರು ಹಿಂಬಾಲಿಸಿ ಕೃತ್ಯವೆಸಗಿರೋದು ಬಯಲಾಗಿದೆ.

ಸದ್ಯ ಈ ಸಂಬಂಧ ದಿನೇಶ್ ಪೊಲೀಸರಿಗೆ ದೂರು ನೀಡಿದ್ದು, ಪೆನ್ಶನ್‍ಮೊಹಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ತನಿಖೆ ಕೈಗೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇರೆಗೆ ಖದೀಮರನ್ನು ಬಂಧಿಸಲು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *